ಉದಯವಾಹಿನಿ, ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ೩-೪ ಮಂದಿ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹೇಳಿದರು.
ದೆಹಲಿಯಿಂದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಅವರು ಇಂದು ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್‌ನಲ್ಲಿ ಇರುವ ಸಮಸ್ಯೆ ಪರಿಹರಿಸಲು ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ದೆಹಲಿಯಲ್ಲಿ ಸಭೆ ನಡೆಸುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ೩-೪ ಮಂದಿ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಅಧಿಕಾರ ಹಂಚಿಕೆಯ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿ ಎಲ್ಲವನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಎಂಬುದು ಏಕಾಂಗಿ ಅಲ್ಲ, ಅದೊಂದು ತಂಡ. ವರಿಷ್ಠ ನಾಯಕರೆಲ್ಲಾ ಒಟ್ಟಿಗೆ ಕುಳಿತು ಚರ್ಚಿಸಿ ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟಿಗೆ ಪರಿಹಾರ ರೂಪಿಸುತ್ತೇವೆ ಎಂದರು. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ಗಾಂಧಿ ಸಹ ಸಮಸ್ಯೆ ಪರಿಹಾರದ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು
ಈ ಸಭೆಯಲ್ಲಿ ಎಲ್ಲ ನಾಯಕರು ಕುಳಿತು ಪರಸ್ಪರ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ಇಲ್ಲ. ಇವೆಲ್ಲಾ ಮಾಧ್ಯಮ ಸೃಷ್ಟಿ ಎಂದು ಹೇಳುತ್ತಾ ಬಂದಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಸಮಸ್ಯೆ ಇರುವುದನ್ನು ಒಪ್ಪಿಕೊಂಡು ಸಮಸ್ಯೆ ಬಗೆಹರಿಸಲು ಸಭೆ ನಡೆಸುವುದಾಗಿ ಹೇಳಿರುವುದು ಮಹತ್ವದ ಬೆಳವಣಿಗೆಯಾಗಿದೆ.
