ಉದಯವಾಹಿನಿ, ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಫಾಜಿಲ್ ನಗರ ಹೆಸರನ್ನು ಬದಲಾಯಿಸಿದ್ದಾರೆ. ಅದಕ್ಕೆ ಪಾವಾ ನಗರಿ ಎಂದು ಮರುನಾಮಕರಣ ಮಾಡಿದ್ದಾರೆ.ಗಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಭಗವಾನ್ ಮಹಾವೀರರು ಫಾಜಿಲ್‌ನಗರದಲ್ಲಿ ಮಹಾಪರಿನಿರ್ವಾಣ ಪಡೆದರು. ಪ್ರಾಚೀನ ಗುರುತನ್ನು ಮರಳಿ ಪಡೆಯಲು ಪಾವಾ ನಗರಿ ಎಂದು ಹೆಸರಿಡಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಫಾಜಿಲ್ ನಗರವನ್ನು ಪಾವಾ ನಗರಿ ಎಂದು ಮರುನಾಮಕರಣ ಮಾಡಲು ಕ್ರಮ ಕೈಗೊಂಡಿದೆ. ಭಗವಾನ್ ಮಹಾವೀರರು ಬಿಹಾರದ ವೈಶಾಲಿಯಲ್ಲಿ ಜನಿಸಿದರೂ, ಅವರ ಮಹಾಪರಿನಿರ್ವಾಣ ಸ್ಥಳವು ಫಾಜಿಲ್ ನಗರದಲ್ಲಿದೆ.
ಇದನ್ನು ಪ್ರಾಚೀನ ಗ್ರಂಥಗಳಲ್ಲಿ ಪಾವಗಡ ಎಂದು ವಿವರಿಸಲಾಗಿದೆ. ಇತಿಹಾಸ ಮತ್ತು ಜೈನ ಸಂಪ್ರದಾಯದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದ್ದರೂ, ಆಧುನಿಕ ಕಾಲದಲ್ಲಿ ಈ ಹೆಸರು ತನ್ನ ಗುರುತನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ, ಈ ಐತಿಹಾಸಿಕ ಸ್ಥಳವನ್ನು ಅದರ ಪ್ರಾಚೀನ ಪರಂಪರೆಯೊಂದಿಗೆ ಮರುಸಂಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಫಾಜಿಲ್ ನಗರ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಗಳಿದ್ದವು. 2021ರ ಸೆಪ್ಟೆಂಬರ್‌ನಲ್ಲಿ ಫಾಜಿಲ್‌ನಗರ ಕ್ಷೇತ್ರದ ಸ್ಥಳೀಯ ಬಿಜೆಪಿ ಶಾಸಕ ಗಂಗಾ ಸಿಂಗ್ ಕುಶ್ವಾಹ ಅವರು ಸಿಎಂ ಯೋಗಿಗೆ ಪತ್ರ ಬರೆದು ಹೆಸರು ಬದಲಾಯಿಸುವಂತೆ ಕೋರಿದ್ದರು
