ಉದಯವಾಹಿನಿ, ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಅಮೆರಿಕ ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳಾದ ಸಿಐಎ (CIA) ಮತ್ತು ಮೊಸಾದ್ ಕಾರಣ ಎಂದು ಕಾಂಗ್ರೆಸ್ ನಾಯಕ ಕುಮಾರ್ ಕೇತ್ಕರ್ ಶಾಕಿಂಗ್‌ ಆರೋಪ ಮಾಡಿದ್ದಾರೆ. ಸಂವಿಧಾನ ದಿನದಂದು ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಕುಮಾರ್ ಕೇತ್ಕರ್ ವಿದೇಶಿ ಗುಪ್ತಚರ ಸಂಸ್ಥೆಗಳಿಂದಾಗಿ ಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ದೂರಿದ್ದಾರೆ.ಪಕ್ಷವು 2004ರ ಲೋಕಸಭಾ ಚುನಾವಣೆಯಲ್ಲಿ 145 ಸ್ಥಾನಗಳನ್ನು ಮತ್ತು ಐದು ವರ್ಷಗಳ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ಟ್ರೆಂಡ್‌ ಮುಂದುವರಿದಿದ್ದರೆ ಕಾಂಗ್ರೆಸ್ 250 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ 2014ರಲ್ಲಿ ಈ ಸಂಖ್ಯೆ 44ಕ್ಕೆ ಇಳಿಯಿತು ಎಂದರು.
2014ರ ಚುನಾವಣೆಯಲ್ಲಿ ಕಾಂಗ್ರೆಸ್‌ 206 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಪಡೆದರೆ ನಮಗೆ ಭಾರತದಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆರಿತು ವಿದೇಶಿ ಗುಪ್ತಚರ ಸಂಸ್ಥೆಗಳು ಇಲ್ಲಿ ಆಟವಾಡಿದವು ಎಂದು ದೂರಿದರು. ಅಮೆರಿಕದ ಸಿಐಎ ಮತ್ತು ಇಸ್ರೇಲಿನ ಮೊಸಾದ್‌ ಭಾರತದಲ್ಲಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿತ್ತು. ಸ್ಥಿರವಾದ ಕಾಂಗ್ರೆಸ್ ಸರ್ಕಾರ ಅಥವಾ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅವರಿಗೆ ಇಲ್ಲಿ ಹಸ್ತಕ್ಷೇಪ ಮತ್ತು ಅವರ ಪರವಾಗಿರುವ ನೀತಿಗಳನ್ನು ಜಾರಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಈ ಕಾರಣಕ್ಕೆ ಭಾರತದಲ್ಲಿ ಕಾಂಗ್ರೆಸ್‌ ಹೊರತಾದ ಬಹುಮತದ ಸರ್ಕಾರ ತರಲು ಮುಂದಾಯಿತು ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!