ಉದಯವಾಹಿನಿ, ದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 7,280 ಕೋಟಿ ರೂ. ವೆಚ್ಚದಲ್ಲಿ ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆಯನ್ನು ಉತ್ತೇಜಿಸುವ ಯೋಜನೆಗೆ ಅನುಮೋದನೆ ನೀಡಿದೆ. ಅಪರೂಪದ ಭೂಮಿಯ ಶಾಶ್ವತ ಆಯಸ್ಕಾಂತ ತಯಾರಿಕೆಯನ್ನು ಉತ್ತೇಜಿಸುವ ಈ ಯೋಜನೆಯು ವರ್ಷಕ್ಕೆ 6,000 ಮೆಟ್ರಿಕ್ ಟನ್‌ ಉತ್ಪಾದನಾ ಗುರಿಯನ್ನು ಹೊಂದಿದೆ. ಇದು ಖನಿಜಗಳ ಮೇಲಿನ ದೇಶದ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಪೂರೈಕೆ ಸರಪಳಿಯನ್ನು ಬಲಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
“ಈ ಯೋಜನೆಯು ಅಪರೂಪದ ಭೂಮಿಯ ಶಾಶ್ವತ ಆಯಸ್ಕಾಂತಗಳ ಉತ್ಪಾದನೆಯನ್ನು ಉತ್ತೇಜಿಸಲಿದೆ. ಈ ಮೂಲಕ ವರ್ಷಕ್ಕೆ ದೇಶದಲ್ಲೇ 6,000 ಮೆಟ್ರಿಕ್ ಟನ್ ಉತ್ಪಾದಿಸಯವ ಗುರುಯನ್ನು ಹೊಂದಲಾಗಿದೆ” ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಶಾಶ್ವತ ಆಯಸ್ಕಾಂತಗಳನ್ನು ಪ್ರಮುಖ ಉದ್ಯಮಗಳಾದ ಎಲೆಕ್ಟ್ರಿಕ್‌ ವಾಹನ, ಏರೋಸ್ಪೇಸ್‌, ಎಲೆಕ್ಟ್ರಾನಿಕ್ಸ್‌, ವೈದ್ಯಕೀಯ ಸಲಕರಣೆ ಮತ್ತು ರಕ್ಷಣೆಯ ಉಪಕರಣಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಯೋಜನೆಯ ಅವಧಿ 7 ವರ್ಷ.
ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ, ಕೈಗಾರಿಕಾ ಬಳಕೆಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್‌ ಬಳಕೆ 2030ರೊಳಗೆ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಇದರತ್ತ ಗಮನ ಹರಿಸಿದೆ. ಪ್ರಸ್ತುತ ಭಾರತದಲ್ಲಿನ ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್‌ ಅನ್ನು ಆಮದು ಮಾಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!