ಉದಯವಾಹಿನಿ, ಮುಂಬಯಿ: ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಆಟಗಾರ್ತಿಯರ ಮೆಗಾ ಹರಾಜಿನಲ್ಲಿ ಭಾರತ ಕ್ರಿಕೆಟ್ ತಂಡದ ತಾರಾ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಅತ್ಯಧಿಕ ಮೊತ್ತ ಪಡೆದರು. ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಕೆ ಮಾಡಿ 3.20 ಕೋಟಿಗೆ ಯುಪಿ ವಾರಿಯರ್ಸ್ ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಆಸ್ಟ್ರೇಲಿಯಾದ ನಾಯಕಿ ಅಲಿಸ್ಸಾ ಹೀಲಿ ಅನ್‌ಸೋಲ್ಡ್‌ ಆದದ್ದು ಅಚ್ಚರಿ ಮೂಡಿಸಿತು.ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದ ದೀಪ್ತಿ ಶರ್ಮಾರನ್ನು ಹರಾಜಿಗೆ ಬಿಟ್ಟಾಗಲೇ ಅವರು ದುಬಾರಿ ಮೊತ್ತ ಪಡೆಯುವುದು ಖಚಿತವಾಗಿತ್ತು. 50 ಲಕ್ಷ ಮೂಲಬೆಲೆ ಹೊಂದಿದ್ದ ದೀಪ್ತಿ ಖರೀದಿಗೆ ಆರಂಭದಿಂದಲೂ ಡೆಲ್ಲಿ ಹಾಗೂ ಯುಪಿ ತಂಡಗಳ ಮಧ್ಯೆ ತೀವ್ರ ಪೈಪೋಟಿ ನಡೆದವು. ಅಂತಿಮವಾಗಿ ಡೆಲ್ಲಿ ₹3.20 ಕೋಟಿ ನೀಡುವುದಾಗಿ ಘೋಷಣೆ ಮಾಡಿತು. ಆದರೆ, ತನ್ನ ಬಳಿ ಇದ್ದ ಆರ್‌ಟಿಎಂ ಕಾರ್ಡ್ ಬಳಸಿದ ಯುಪಿ ತಂಡ ಅಷ್ಟೇ ಮೊತ್ತಕ್ಕೆ ಅವರನ್ನು ತಂಡಕ್ಕೆ ವಾಪಾಸ್‌ ಸೇರಿಸಿಕೊಂಡಿತು.
ದೀಪ್ತಿ ಬಳಿಕ ನ್ಯೂಜಿಲ್ಯಾಂಡ್‌ನ ಆಲ್‌ರೌಂಡರ್‌ ಅಮೇಲಿಯಾ ಕೆರ್‌ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿ ಎನಿಸಿದರು. ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ ತಂಡವೇ 3 ಕೋಟಿಗೆ ಖರೀದಿ ಮಾಡಿತು. ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ್ದ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೋಲ್ವಾರ್ಡ್ 1.1 ಕೋಟಿ ಮೊತ್ತಕ್ಕೆ ಡೆಲ್ಲಿ ತಂಡದ ಪಾಲಾದರು.

ಆರ್‌ಸಿಬಿ ಸೇರಿದ ಸ್ಟಾರ್‌ ಆಲ್‌ರೌಂಡರ್‌: ಆರ್‌ಸಿಬಿ ತಂಡ ಇಂಗ್ಲೆಂಡ್‌ನ 24 ವರ್ಷದ ವೇಗಿ ಲಾರೆನ್ ಬೆಲ್ ಅವರನ್ನು ಗರಿಷ್ಠ 90 ಲಕ್ಷ ವ್ಯಯಿಸಿ ತಂಡಕ್ಕೆ ಸೇರಿಸಿಕೊಂಡಿತು. 30 ಲಕ್ಷ ಮೂಲಬೆಲೆ ಹೊಂದಿದ್ದರು. ಉಳಿದಂತೆ ತಲಾ 65 ಲಕ್ಷಕ್ಕೆ ದಕ್ಷಿಣ ಆಫ್ರಿಕಾ ಹಾರ್ಡ್‌ ಹಿಟ್ಟರ್‌ ನಾಡಿನ್ ಡಿ ಕ್ಲರ್ಕ್ ಮತ್ತು ಟೀಮ್‌ ಇಂಡಿಯಾದ ಸ್ಪಿನ್‌ ಆಲ್‌ರೌಂಡರ್‌ ರಾಧಾ ಯಾದವ್‌ ಅವರನ್ನು ಖರೀದಿ ಮಾಡಿತು. ಉಭಯ ಆಟಗಾರ್ತಿಯರು 30 ಲಕ್ಷ ಮೂಲಬೆಲೆ ಹೊಂದಿದ್ದರು. ಆಸ್ಟ್ರೇಲಿಯಾ ಜಾರ್ಜಿಯಾ ವೋಲ್ ಅವರನ್ನು 60 ಲಕ್ಷಕ್ಕೆ ತಂಡಕ್ಕೆ ಸೇರಿಸಿಕೊಂಡಿತು. ಆಶಾ ಶೋಭನಾಗೂ ಆರ್‌ಸಿಬಿ ಪೈಪೋಟಿ ನಡೆಸಿತು. ಆದರೆ ಅಂತಿಮವಾಗಿ ಯುಪಿ ತಂಡ 1.10 ಕೋಟಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಹಿರಿಯ ಆಟಗಾರ್ತಿ ಶಿಖಾ ಪಾಂಡೆ 2.4 ಕೋಟಿಗೆ ಯುಪಿ ವಾರಿಯರ್ಸ್‌ ಸೇರಿದರು.

Leave a Reply

Your email address will not be published. Required fields are marked *

error: Content is protected !!