ಉದಯವಾಹಿನಿ, ಗುವಾಹಟಿ : ದಕ್ಷಿಣ ಆಫ್ರಿಕಾದ ಸ್ಟಾರ್‌ ಆಟಗಾರ ಐಡೆನ್ ಮಾರ್ಕ್ರಾಮ್ ಟೆಸ್ಟ್ ಪಂದ್ಯವೊಂದರಲ್ಲಿ ಫೀಲ್ಡರ್ ಆಗಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಬುಧವಾರ (ನವೆಂಬರ್ 26, 2025) ಗುವಾಹಟಿಯಲ್ಲಿ ಮುಕ್ತಾಯ ಕಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು.
ಮಾರ್ಕ್ರಾಮ್ ಈ ಪಂದ್ಯದಲ್ಲಿ ಒಂಬತ್ತು ಕ್ಯಾಚ್‌ಗಳನ್ನು ಹಿಡಿದರು. ಮೊದಲ ಇನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ಕ್ಯಾಚ್‌ಗಳನ್ನು ಪಡೆದರು. ಇದು ಟೆಸ್ಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಆಟಗಾರನೊಬ್ಬ ಹಿಡಿದ ಅತ್ಯಧಿಕ ಕ್ಯಾಚ್‌ ಆಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್‌ ಇಂಡಿಯಾದ ಅಜಿಂಕ್ಯ ರಹಾನೆ ಹೆಸರಿನಲ್ಲಿತ್ತು. ರಹಾನೆ 8 ಕ್ಯಾಚ್‌ಗಳನ್ನು ಹಿಡಿದಿದ್ದರು. 2015ರಲ್ಲಿ ಶ್ರೀಲಂಕಾ ವಿರುದ್ಧಅವರು ಈ ಸಾಧನೆಗೈದಿದ್ದರು.
ಉಳಿದಂತೆ ಆಸ್ಟ್ರೇಲಿಯಾದ ಗ್ರೇಗ್‌ ಚಾಪೆಲ್‌ (1974ರಲ್ಲಿ ಇಂಗ್ಲೆಂಡ್ ವಿರುದ್ಧ), ಭಾರತದ ಯಜುರ್‌ವಿಂದ್ರ ಸಿಂಗ್‌ (1977ರಲ್ಲಿ ಇಂಗ್ಲೆಂಡ್ ವಿರುದ್ಧ), ಶ್ರೀಲಂಕಾದ ಹಷನ್‌ ತಿಲಕರತ್ನೆ (1992ರಲ್ಲಿ ನ್ಯೂಜಿಲೆಂಡ್‌ ವಿರುದ್ಧ), ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ (1997ರಲ್ಲಿ ಜಿಂಬಾಬ್ವೆ ವಿರುದ್ಧ) ಆಸ್ಟ್ರೇಲಿಯಾದ ಮ್ಯಾಥ್ಯೂ ಹೈಡನ್‌ (2004ರಲ್ಲಿ ಶ್ರೀಲಂಕಾ ವಿರುದ್ಧ), ಕೆ.ಎಲ್‌. ರಾಹುಲ್‌ (2018ರಲ್ಲಿ ಇಂಗ್ಲೆಂಡ್ ವಿರುದ್ಧ) ತಲಾ ಏಳು ಕ್ಯಾಚ್‌ಗಳನ್ನು ಪಡೆದಿದ್ದಾರೆ.549 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಕಂಡು 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ 408 ರನ್‌ಗಳ ಹೀನಾಯ ಸೋಲು ಅನುಭವಿಸಿತು. ರನ್‌ಗಳ ಅಂತರದಲ್ಲಿ ಇದು ಭಾರತದ ಟೆಸ್ಟ್ ಇತಿಹಾಸದಲ್ಲಿಯೇ ಅತಿದೊಡ್ಡ ಸೋಲಾಗಿದೆ. ಈ ಸೋಲು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪುವ ಭಾರತದ ಹಾದಿಯನ್ನು ಗಂಭೀರವಾಗಿ ಕುಂಠಿತಗೊಳಿಸಿದೆ.

ಇನ್ನುಳಿದ ಒಂಬತ್ತು ಟೆಸ್ಟ್‌ಗಳಿಂದ ಭಾರತ 78 ಅಂಕಗಳನ್ನು ಪಡೆಯಬೇಕು. ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನಲ್ಲಿ ತಲಾ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ಐದು ಪಂದ್ಯಗಳ ಸರಣಿಯನ್ನು ಭಾರತ ಆಡಲಿದೆ. ಎಲ್ಲ ಪಂದ್ಯಗಳನ್ನು ಗೆಲ್ಲುವ ಜತೆಗೆ ತನಗಿಂತ ಮೇಲಿರುವ ತಂಡಗಳ ಸೋಲಿನ ಲೆಕ್ಕಾಚಾರ ಕೂಡ ಮಾಡಬೇಕಿದೆ. ಸದ್ಯ ಅಂಕಪಟ್ಟಿಯಲ್ಲಿ ಭಾರತ 5 ನೇ ಸ್ಥಾನದಲ್ಲಿದೆ. ಶೇ. 48.15 ರಷ್ಟು ಗೆಲುವಿನ ಪ್ರಮಾಣವನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!