ಉದಯವಾಹಿನಿ, ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ದಿತ್ವಾ ಚಂಡಮಾರುತ ಶೀಘ್ರದಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಅಪ್ಪಳಿಸಲಿದೆ. ಇದರಿಂದ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಿತ್ವಾ ಚಂಡಮಾರುತವು ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನವೆಂಬರ್ 30ರಿಂದ ಭಾರೀ ಮಳೆ ಉಂಟು ಮಾಡಲಿದೆ. ಸೆನ್ಯಾರ್ ಚಂಡಮಾರುತ ದುರ್ಬಲಗೊಳ್ಳುತ್ತಿದ್ದಂತೆ ದಿತ್ವಾ ಚಂಡಮಾರುತ ರೂಪುಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಿತ್ವಾ ಚಂಡಮಾರುತವು ಶ್ರೀಲಂಕಾ ಕರಾವಳಿ ಮತ್ತು ಪಕ್ಕದ ನೈಋತ್ಯ ಬಂಗಾಳಕೊಲ್ಲಿಯಾದ್ಯಂತ ವಾಯುವ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಚಂಡಮಾರುತದ ಪ್ರಭಾವವು ವ್ಯಾಪಕವಾಗಿ ಹರಡುವ ನಿರೀಕ್ಷೆಯಿದೆ. ಇದರಿಂದ ನವೆಂಬರ್ 30ರಿಂದ ಐದು ದಿನಗಳ ಕಾಲ ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಿತ್ವಾ ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 8 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ನವೆಂಬರ್ 27ರಂದು ಸಂಜೆ ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಇದು ಶ್ರೀಲಂಕಾದ ಬಟ್ಟಿಕಲೋವಾದಿಂದ ವಾಯುವ್ಯಕ್ಕೆ ಸುಮಾರು 8 ಕಿ.ಮೀ., ತ್ರಿಕೋನಮಿಯಿಂದ ದಕ್ಷಿಣದಲ್ಲಿ 80 ಕಿ.ಮೀ., ಹಂಬಂಟೋಟಾದಿಂದ ಈಶಾನ್ಯದಲ್ಲಿ 200 ಕಿ.ಮೀ., ಭಾರತ ಪುದುಚೇರಿಯಿಂದ ಆಗ್ನೇಯದಲ್ಲಿ 480 ಕಿ.ಮೀ. ಹಾಗೂ ಚೆನ್ನೈನಿಂದ 580 ಕಿ.ಮೀ. ದೂರದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
