ಉದಯವಾಹಿನಿ,ಹುಳಿಯಾರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪತ್ರಕರ್ತರ ಸಂಘದಿಂದ ಇತ್ತೀಚೆಗೆ ಮಣಿಪಾಲದಲ್ಲಿ ಏರ್ಪಡಿಸಿದ್ದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಹುಳಿಯಾರಿನ ಪತ್ರಕರ್ತ ಡಿ.ಆರ್.ನರೇಂದ್ರಬಾಬು ಅವರ ಪುತ್ರಿ ಡಿ.ಎನ್.ವರ್ಷಿಣಿ ಅವರು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಲುವಾಗಿ ಪುರಸ್ಕರಿಸಲಾಯಿತು. ಅಲ್ಲದೆ ಮಕ್ಕಳಿಗೆ ಉಡುಪಿ ಶ್ರೀ ಕೃಷ್ಣನ ದರ್ಶನ ಮಾಡಿಸಿ ಅನಾಟಮಿ ಮ್ಯೂಸಿಯಂ, ಪ್ಲಾನಿಟೋರಿಯಂ ತೋರಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾತನಾಡಿ ತಂದೆತಾಯಿ ಕಷ್ಟಪಟ್ಟು ತಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದಾರೆ. ಅವರ ಕನಸು ನನಸು ಮಾಡುವ ಗುರುತರವಾದ ಜವಾಬ್ದಾರಿ ಮಕ್ಕಳ ಮೇಲಿದೆ ಪೋಷಕರ ಕನಸು ನನಸು ಮಾಡಲು ಸನ್ನದ್ಧರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ ಸಂಪ್ರದಾಯ, ಸಂಸ್ಕೃತಿ, ಆಚಾರ ವಿಚಾರಗಳನ್ನು ಯುವಪೀಳಿಗೆಗೆ ತಲುಪಿಸಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಡವಿದಾಗ ಸಮಾಜದ ಮುಂದಿಡುವ ಮೂಲಕ ಪತ್ರಕರ್ತರು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳೂ ಜಾತ್ಯಾತೀತ ಮನೋಭಾವ ಬೆಳಸಿಕೊಂಡು ಸಾಮರಸ್ಯದ ಜೀವನ ರೂಢಿಸಿಕೊಳ್ಳಬೇಕು ಎಂದರು.
ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ ಮಕ್ಕಳು ದೇಶದ ಸಂಪತ್ತು ಹಾಗೂ ಭವಿಷ್ಯವಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಗಬೇಕಿದೆ. ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಅಡ್ಡಿಯಾಗದಂತೆ ಸಮಾಜ ನೆರವಿಗೆ ನಿಲ್ಲಬೇಕಿರುವುದು ಆದ್ಯ ಕರ್ತವ್ಯ ವಾಗಿದ್ದು ಈ ನಿಟ್ಟಿನಲ್ಲಿ ಮಣಿಪಾಲ ಸಂಸ್ಥೆಯೂ ಕೈಜೋಡಿ ಸಲಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ.ಅವಿನಾಶ್ ಶೆಟ್ಟಿ, ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ ಮಚ್ಚಿಂದ್ರ, ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್‌ಶೆಟ್ಟಿ, ಸಂಘದ ರಜತ ಮಹೋತ್ಸವದ ಸಮಿತಿ ಸಂಚಾಲಕ ಮಹಮ್ಮದ್ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.
