ಉದಯವಾಹಿನಿ, ಜಿಯೋ ಹಾಟ್‌ಸ್ಟಾರ್ ತನ್ನ ಬಹುನಿರೀಕ್ಷಿತ ಮೆಡಿಕಲ್ ಡ್ರಾಮಾ ʻಹಾರ್ಟ್‌ಬೀಟ್ʼ ಸರಣಿ ಅನ್ನು ಕನ್ನಡದಲ್ಲಿ ನವೆಂಬರ್ 28 ರಿಂದ ಪ್ರಾರಂಭಿಸುತ್ತಿದೆ. 100 ಎಪಿಸೋಡ್ಗಳನ್ನು ಒಳಗೊಂಡಿರುವ ಈ ಭವ್ಯ ಸೀಸನ್, ವೈದ್ಯಕೀಯ ಲೋಕದ ಸವಾಲುಗಳು, ಸಂಬಂಧಗಳ ಸಂಘರ್ಷಗಳು ಮತ್ತು ಮಾನವೀಯ ಭಾವನೆಗಳ ರೋಚಕ ಸಂಯೋಜನೆಯನ್ನು ಪ್ರೇಕ್ಷಕರಿಗೆ ಆವರಿಸುವಂತೆ ತರುತ್ತದೆ. ಈ ಶೋಗೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇದು ಸರಣಿಯ ಗುಣಮಟ್ಟ ಮತ್ತು ಭಾವುಕ ಕಥನಕ್ಕೆ ಸಾಕ್ಷಿಯಾಗುತ್ತದೆ.
ಮುಖ್ಯ ಪಾತ್ರದಲ್ಲಿ ದೀಪಾ ಬಾಲು, ಜೊತೆಗೂಡಿ ಅನುಮೋಲ್, ಚಾರುಕೇಶ್, ಕಾರ್ತಿಕ್ ಕುಮಾರ್ ಮತ್ತು ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸರಣಿಯನ್ನು ದೀಪಕ್ ಸುಂದರರಾಜನ್ ಬರೆದು, ದೀಪಕ್ ಸುಂದರರಾಜನ್, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ. ಅಮೇರಿಕದ ಖ್ಯಾತ ಮೆಡಿಕಲ್ ಡ್ರಾಮಾಗಳಾದ ನ್ಯೂ ಆಮ್ಸ್ಟರ್ಡ್ಯಾಮ್ ಮತ್ತು ಗ್ರೇ’ಸ್ ಅನಾಟಮಿ ಯ ಶೈಲಿಯನ್ನು ಹೋಲುವ ಈ ಸರಣಿ, ಗಾಲ್ಪಿಕ ಆರ್.ಕೆ ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ ಅನ್ನು ಹಿನ್ನಲೆಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಸರ್ಜಿಕಲ್ ಇಂಟರ್ನ್ಗಳು, ರೆಸಿಡೆಂಟ್ಗಳು ಮತ್ತು ಅಟೆಂಡಿಂಗ್ ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು ಹಾಗೂ ಅವರ ವೈಯಕ್ತಿಕ ಬದುಕಿನ ಸಂಘರ್ಷಗಳು ನೈಜವಾಗಿ ಮೂಡಿ ಬರುತ್ತವೆ.
