ಉದಯವಾಹಿನಿ, ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯ ನಡೆದಿದ್ದ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ ಪಿಚ್‌ ಬಗ್ಗೆ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನೀಡಿದ್ದ ಹೇಳಿಕೆ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಅಸಮಾಧಾನವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಭಾರಿ ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಆ ಮೂಲಕ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು. ಇದರೊಂದಿಗೆ ಭಾರತ ತಂಡ ಗಂಭೀರ್‌ ಮಾರ್ಗದರ್ಶನದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಎರಡನೇ ಬಾರಿ ಕ್ಲೀನ್‌ ಸ್ವೀಪ್‌ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಗೌತಮ್‌ ಗಂಭೀರ್‌ ಅವರ ಮೇಲೆ ಪ್ರಶ್ನೆಗಳು ಎದ್ದಿವೆ.
“ನಾನು ಎದುರು ನೋಡುತ್ತಿದ್ದ ಪಿಚ್‌ ಇದಾಗಿತ್ತು. ಇಲ್ಲಿನ ಪಿಚ್‌ ಕ್ಯುರೇಟರ್‌ ತುಂಬಾ ಸಹಾಯಕ ಹಾಗೂ ಬೆಂಬಲವಾಗಿದ್ದರು. ಈ ತರಹದ ಪಿಚ್‌ ನಮಗೆ ಬೇಕಿತ್ತು ಹಾಗೂ ಅದೇ ತರಹ ನಮಗೆ ಪಿಚ್‌ ಸಿಕ್ಕಿದೆ. ಅಂದ ಹಾಗೆ ನೀವು ಚೆನ್ನಾಗಿ ಆಡಿಲ್ಲವಾದರೆ, ಈ ರೀತಿಯ ಫಲಿತಾಂಶ ನಿಮಗೆ ಸಿಗುತ್ತದೆ,” ಎಂದು ಕೋಲ್ಕತಾ ಟೆಸ್ಟ್‌ ಸೋಲಿನ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ತಿಳಿಸಿದ್ದರು.
“ಹೌದು, ಅದು ತುಂಬಾ ಅದ್ಭುತವಾದ ಪಿಚ್‌ ಅಲ್ಲದಿರಬಹುದು, ಅಲ್ಲಿ ನೀವು ದೊಡ್ಡ ಹೊಡೆತಗಳನ್ನು ಆಡಬಹುದು. ಆದರೆ ನೀವು ನಿಮ್ಮ ತಲೆಯನ್ನು ಕೆಳಗೆ ಹಾಕಲು ಸಿದ್ಧರಿದ್ದರೆ, ಖಂಡಿತವಾಗಿಯೂ ಅದು ನೀವು ರನ್ ಗಳಿಸಬಹುದಾದ ಪಿಚ್‌. ಈ ವಿಕೆಟ್‌ನಲ್ಲಿ ಯಾವುದೇ ಕಠಿಣತೆ ಇರಲಿಲ್ಲ. ಅದು ಆಡಲಾಗದ ಪಿಚ್‌ ಆಗಿರಲಿಲ್ಲ. ಅದು ನಿಮ್ಮ ತಂತ್ರವನ್ನು ನಿರ್ಣಯಿಸಬಹುದಾದ ವಿಕೆಟ್ ಆಗಿತ್ತು, ನಿಮ್ಮ ಮಾನಸಿಕ ದೃಢತೆಯನ್ನು ಪ್ರಶ್ನಿಸಬಹುದು ಮತ್ತು ಅದಕ್ಕಿಂತ ಮುಖ್ಯವಾದದ್ದು ನಿಮ್ಮ ಮನೋಧರ್ಮ. ಮುಖ್ಯ ವಿಷಯವೆಂದರೆ ನೀವು ಸರದಿಯಲ್ಲಿ ಹೇಗೆ ಆಡಬೇಕೆಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದನ್ನೇ ನಾವು ಕೇಳಿಕೊಂಡದ್ದು ಮತ್ತು ಇದನ್ನೇ ನಾವು ಪಡೆದುಕೊಂಡದ್ದು,”ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!