ಉದಯವಾಹಿನಿ, ಮುಂಬೈ: ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ವಿರುದ್ಧ ಅಸಮಧಾನ ವ್ಯಕ್ತವಾಗುತ್ತಿದೆ. ಆದರೆ, ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿಯ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡದಲ್ಲಿದ್ದಾಗ ಉತ್ತಮ ಪ್ರದರ್ಶನ ಮೂಡಿಬರುತ್ತಿತ್ತು. ಉಭಯ ಆಟಗಾರರ ವಿದಾಯದ ಬಳಿಕ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಕೊಹ್ಲಿ, ರೋಹಿತ್ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಗೌತಮ್ ಗಂಭೀರ್ ಕಾರಣ ಎಂದು ಹಲವರು ಕಿಡಿ ಕಾರಿದ್ದಾರೆ.
ಇದರ ಬೆನ್ನಲ್ಲೇ ಗವಾಸ್ಕರ್, ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಮತ್ತು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದವೂ 0-3 ಅಂತರದಲ್ಲಿ ಸರಣಿ ಸೋತಿತ್ತು. ಆ ಎರಡೂ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಭಾಗವಹಿಸಿದ್ದರು. ಕಳಪೆ ಪ್ರದರ್ಶನದ ಪರಿಣಾಮವಾಗಿ ಸ್ಪಿನ್ ಬೌಲರ್ ಆರ್ ಅಶ್ವಿನ್ ಅಸೀಸ್ ಪ್ರವಾಸದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕ್ರಿಕೆಟ್ ಗವಾಸ್ಕರ್, “ನಿವೃತ್ತಿ ಬಹುಶಃ, ಅವರ ಭವಿಷ್ಯವನ್ನು ಪರಿಗಣಿಸುವಂತೆ ಅವರನ್ನು ಕೇಳಿರಬಹುದು. ಆದರೆ ಅವರು ಇಲ್ಲಿದ್ದರೆ ನಾವು ಗೆಲ್ಲುತ್ತಿದ್ದೆವು ಎಂದು ಹೇಳಲು ಸಾಧ್ಯವಿಲ್ಲ. ನಾವು ನ್ಯೂಜಿಲೆಂಡ್ ವಿರುದ್ಧ ಸೋತಾಗ ಅವರು ತಂಡದ ಜೊತೆಯಲ್ಲೇ ಇದ್ದರು. ಆದರೆ ಏನಾಯಿತು? ನಾವು 0-3 ಅಂತರದಲ್ಲಿ ಸೋತಿದ್ದೇವೆ, ಅಲ್ಲವೇ? ಹಾಗಾದರೆ ಆಸ್ಟ್ರೇಲಿಯಾದಲ್ಲಿ ಏನಾಯಿತು? ನಾವು ಈ ರೀತಿ ಯೋಚಿಸಬಾರದು” ಎಂದು ಗವಾಸ್ಕರ್ ತಿಳಿಸಿದರು.
