ಉದಯವಾಹಿನಿ, ಸಿಹಿ ಗೆಣಸು ಒಂದು ಜಾತಿಯ ಗೆಡ್ಡೆ. ಇದು ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು. ಇದರಿಂದ ತುಂಬಾನೇ ಆರೋಗ್ಯ ಪ್ರಯೋಜನಗಳಿವೆ, ಇದರಲ್ಲಿ ಯಥೇಚ್ಚವಾದ ಪೋಷಕಾಂಶಗಳು ತುಂಬಿದೆ. ಚಳಿಗಾಲಕ್ಕೆ ಗೆಣಸು ಹೇಳಿ ಮಾಡಿಸಿದ ಆಹಾರ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗು ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ. ಹೆಸರೇ ಸೂಚಿಸುವಂತೆ ಸಿಹಿ ಗೆಣಸು ಸ್ವಾಭಾವಿಕವಾಗಿ ಸಿಹಿ ರುಚಿಯನ್ನ ಹೊಂದಿರುತ್ತವೆ. ಗೆಣಸು ಬಿ1, ಬಿ2, ಬಿ3, ಬಿ6, ಬಿ9, ಕ್ಯಾಲ್ಸಿಯಂ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಇನ್ನು ಅನೇಕ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.
ಸಿಹಿ ಗೆಣಸಿನ ಮೂಲ ದಕ್ಷಿಣ ಅಮೇರಿಕಾ ಮೂಲದಿಂದ ಬಂದ ಈ ಸಿಹಿ ಗೆಣಸು, ಇಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ದಕ್ಷಿಣ ಅಮೆರಿಕಾದಲ್ಲಿ ಇದಕ್ಕೆ ಕಮೋಟೆ ಅಥವಾ ಕುಮರ ಎಂಬ ಸ್ಥಳೀಯ ಹೆಸರುಗಳಿವೆ. ಇದರ ಹೂವು ಬಹಳ ಅಂದವಾಗಿ ಇರುವುದರಿಂದ ಅಲಂಕಾರಿಕ ಸಸ್ಯವಾಗಿ ಕೂಡಾ ಬಳಕೆ ಮಾಡುವುದುಂಟು. ಪ್ರಪಂಚದ ಉಷ್ಣ ಮತ್ತು ಉಪೋಷ್ಣವಲಯಗಳಲ್ಲಿನ ದೇಶಗಳಲ್ಲೆಲ್ಲ ಬಹುಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿರುವ ಒಂದು ಮುಖ್ಯ ಹಾಗೂ ಸುಪ್ರಸಿದ್ಧ ಆಹಾರಸಸ್ಯ (ಸ್ವೀಟ್ ಪೊಟೇಟೊ) ಈ ಗೆಣಸು ಆಗಿದೆ. ಆಫ್ರಿಕಾ, ಚೀನಾ, ಜಪಾನ್, ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ದಕ್ಷಿಣ ರಾಜ್ಯಗಳು. ಆಗ್ನೇಯ ಏಷ್ಯಾ, ಭಾರತ, ವೆಸ್ಟ್‌ ಇಂಡೀಸ್ ಮುಂತಾದೆಡೆಗಳಲ್ಲೆಲ್ಲ ಇದರ ಗೆಣಸನ್ನು ಬೆಳೆಯಲಾಗುತ್ತದೆ.
ಗೆಣಸು ನೆಲದಮೇಲೆ ಹರಡಿಕೊಂಡು ಬೆಳೆಯುವ ಒಂದು ಬಳ್ಳಿ. ಸ್ವಭಾವತಃ ಇದು ಬಹುವಾರ್ಷಿಕ ಸಸ್ಯವಾದರೂ ಬೇಸಾಯ ಕ್ರಮದಲ್ಲಿ ಏಕವಾರ್ಷಿಕವೆಂಬಂತೆ ನೋಡಿಕೊಳ್ಳಲಾಗುತ್ತದೆ. ಸಾಧಾರಣವಾಗಿ ಒಂದು ಗಿಡದಲ್ಲಿ 10-15 ಗೆಡ್ಡೆಗಳು ಹುಟ್ಟುತ್ತವೆ. ಗಡ್ಡೆ-ಗೆಣಸುಗಳು ಪೂರ್ವಿಕರ ಕಾಲದಿಂದಲೇ ನಮ್ಮ ಆಹಾರವಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಮರಗೆಣಸಿಗಿಂತಲೂ ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವಂಥ ಗಡ್ಡೆ. ತಿಳಿಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ತಿಳಿಯಬಹುದು. ಗೆಣಸು ಆರೋಗ್ಯಕರ ಆಹಾರಗಳಲ್ಲೊಂದಾಗಿದ್ದು, ಇದನ್ನು ಬೇಯಿಸಿ ಇಲ್ಲವೆ ಸುಟ್ಟು ತಿನ್ನುವುದಲ್ಲದೆ ಇದರಿಂದ ರೊಟ್ಟಿಗಳನ್ನೂ ಕೆಲವರು ತಯಾರಿಸುತ್ತಾರೆ. ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು, ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಲಾಗುತ್ತದೆ, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಲಾಗುತ್ತದೆ. ಬಜ್ಜಿಗಳ ರೀತಿಯಲ್ಲಿಯೂ ಕೆಲವರು ಸವಿಯುತ್ತಾರೆ.

Leave a Reply

Your email address will not be published. Required fields are marked *

error: Content is protected !!