ಉದಯವಾಹಿನಿ, ಬೆಂಗಳೂರು: ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ ಎಂದು ನಾನು ಹಾಗೂ ಅವರು ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಿ ಸರ್ಕಾರದ ವಿರುದ್ಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ತಮ್ಮ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಾವಿಬ್ಬರೂ ಪಕ್ಷದ ವರಿಷ್ಠರು ಸೂಚಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ತೀರ್ಮಾನಿಸಿದ್ದೇವೆ. ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ ಮಾಡಲು ಸೂಚಿಸಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ಈಗಲೂ ಇಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡಿಗೆ ಮಾಹಿತಿ ನೀಡಲಾಗುವುದು. ಗೊಂದಲ ಸೃಷ್ಟಿಯಾಗಿದೆ, ಕೆಲವು ಮಾಧ್ಯಮಗಳು ಇದನ್ನು ಸೃಷ್ಟಿಸಿವೆ ಎಂದರು. ಶಾಸಕರು ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿರಬಹುದು. ಹಾಗೆಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕೆಲವರು ಇಂಥ ಕಾರಣಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ ಎಂದರು.
ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಡಿ.ಕೆ.ಶಿವಕುಮಾರ್, ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಉಪಸ್ಥಿತರಿದ್ದರು. ಉಪಹಾರ ಸಭೆಯಲ್ಲಿ ಏನೂ ಮಾತನಾಡಿಲ್ಲ. ಇಬ್ಬರೂ ನಮ್ಮ ಮನೆಯಲ್ಲಿ ಒಟ್ಟಿಗೆ ಉಪಹಾರ ಸೇವಿಸಿದ್ದೇವೆ. ಪಕ್ಷದ ವರಿಷ್ಠರಾದ ವೇಣುಗೋಪಾಲ್ ಅವರು ಪೊನ್ನಣ್ಣ ಅವರಿಗೆ ಕರೆ ಮಾಡಿ ಶಿವಕುಮಾರ್ ಅವರನ್ನು ಉಪಾಹಾರಕ್ಕೆ ಕರೆಯಲು ಸೂಚಿಸಿದ್ದರು. ಡಿಸಿಎಂ ಅವರಿಗೂ ಇದನ್ನೇ ತಿಳಿಸಿದ್ದರು. ಅವರೇ, ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಆಹ್ವಾನತ್ತಿದ್ದರು. ಮತ್ತೊಂದು ದಿನ ಊಟಕ್ಕೆ ಬರೋಣ ಎಂದು ತಿಳಿಸಿ ನಮ್ಮ ಮನೆಗೇ ಉಪಾಹಾರಕ್ಕೆ ಕರೆದೆ ಎಂದರು.
