ಉದಯವಾಹಿನಿ, ಜೈಪುರ: ʻಲಕ್ಕಿ ಬಾಸ್ಕರ್ʼ ಸಿನಿಮಾ ನೋಡಿದ್ರೆ ಒಬ್ಬ ಸಾಧಾರಣ ಬ್ಯಾಂಕ್ ಉದ್ಯೋಗಿ 100 ಕೋಟಿ ರೂ. ಹಣ ಗಳಿಸೋದು ಅಚ್ಚರಿ ತರಿಸುತ್ತೆ. ಆದ್ರೆ ರಿಯಲ್ ಲೈಫಲ್ಲಿ ಆ ರೀತಿಯ ಘಟನೆಗಳು ತೀರ ಅಪರೂಪ. ಇದೀಗ ಅಂತಹದ್ದೇ ಘಟನೆಯೊಂದು ಉದಯಪುರದಲ್ಲಿ ನಡೆದಿದೆ. 2 ಕೋಣೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ರ‍್ಯಾಪಿಡೋ ಚಾಲಕನ ಬ್ಯಾಂಕ್ ಖಾತೆಯಲ್ಲಿ ನಡೆದ ವಹಿವಾಟು ಹಾಗೂ ಖರ್ಚು ವೆಚ್ಚ ನೋಡಿ ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಏಕೆಂದ್ರೆ ರ‍್ಯಾಪಿಡೋ ಚಾಲಕನಿಗೆ ಸಂಪರ್ಕವೇ ಇಲ್ಲದ, ಆತ್ಮೀಯರೂ ಅಲ್ಲ, ಗೆಳೆಯ, ಕುಟುಂಬಸ್ಥರು ಅಲ್ಲದ ಜೋಡಿಗಳ ಮದುವೆಗೆ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಕೇವಲ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಆಗಸ್ಟ್ 19, 2024 ರಿಂದ ಏಪ್ರಿಲ್ 16, 2025ರ ನಡುವೆ ವಹಿವಾಟು ನಡೆದಿದೆ. ಇದೀಗ ರ‍್ಯಾಪಿಡೋ ಚಾಲಕ ಅರೆಸ್ಟ್ ಆಗಿದ್ದಾನೆ. ಇಷ್ಟೇ ಅಲ್ಲ ಈತನ ರೋಚಕ ಕತೆಗಳು ಹೊರಬಂದಿದೆ.
ಹೌದು. 1xBet ಆನ್‌ಲೈನ್ ಬೆಟ್ಟಿಂಗ್ ನೆಟ್‌ವರ್ಕ್ ಅಕ್ರಮ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ತನಿಖೆ ನಡೆಸುತ್ತಿದ್ದ ವೇಳೆ ಇಡಿ ಅಧಿಕಾರಿಗಳ ತಂಡ ಬೈಕ್ ಟ್ಯಾಕ್ಸಿ ಚಾಲಕನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 331.36 ಕೋಟಿ ರೂ. ವಹಿವಾಟು ನಡೆದಿರುವುದನ್ನು ಪತ್ತೆಹಚ್ಚಿದೆ. ದಿನಕ್ಕೆ 500-600 ರೂ. ಸಂಪಾದಿಸಿಕೊಂಡು ಗುಡಿಸಲಲ್ಲಿ ವಾಸ ಮಾಡಿಕೊಂಡಿದ್ದ ಚಾಲಕ ಇಷ್ಟು ಕೋಟಿ ವಹಿವಾಟು ನಡೆಸಿದ್ದು ಕಂಡು ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ದಂಗಾಗಿದ್ದಾರೆ.
