ಉದಯವಾಹಿನಿ, ಚೆನ್ನೈ ನ.30ಕ್ಕೆ ತಮಿಳುನಾಡು ಕರಾವಳಿಗೆ ದಿತ್ವಾಹ್ ಚಂಡಮಾರುತ ಅಪ್ಪಳಿಸಲಿದ್ದು, ಪರಿಣಾಮ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿ ಬೀಸುವ ಮುನ್ಸೂಚನೆಯಿರುವ ಕಾರಣ ಚೆನ್ನೈನ ವಿಮಾನಯಾನ ಅಧಿಕಾರಿಗಳು 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದಾರೆ. ಪರಿಣಾಮ ಮಧುರೈ, ತಿರುಚಿರಾಪಳ್ಳಿ, ತೂತುಕುಡಿ, ಸೇಲಂ, ಬೆಂಗಳೂರು, ಹೈದರಾಬಾದ್ ಮತ್ತು ಜಾಫ್ನಾ ಮುಂತಾದ ಸ್ಥಳಗಳಿಗೆ ಸಂಚರಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ. ನಿರ್ಗಮನ ಮತ್ತು ಆಗಮನ ಎರಡು ಮಾರ್ಗದ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದ ಉಂಟಾಗುವ ಅಪಾಯಗಳನ್ನು ತಡೆಯಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ದಿತ್ವಾಹ್ ಚಂಡಮಾರುತ ತೀವ್ರಗೊಳ್ಳುತ್ತಿದ್ದಂತೆ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನೂ ಸ್ಥಳೀಯ ಪ್ರದೇಶದಲ್ಲಿ ಆಗುತ್ತಿರುವ ಮಳೆಯ ಪ್ರಮಾಣ ಗಮನದಲ್ಲಿಟ್ಟುಕೊಂಡು ಜಿಲ್ಲಾವಾರು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೆರಂಬಲೂರು, ತಿರುವರೂರು, ನಾಗಪಟ್ಟಣಂ, ಮೈಲಾಡುತುರೈ, ಕಡಲೂರು, ಕಲ್ಲಕುರಿಚಿ, ಪುದುಕೊಟ್ಟೈ, ಪುದುಚೇರಿ ಮತ್ತು ಕಾರೈಕಲ್‌ಗಳಲ್ಲಿ ಶನಿವಾರ (ನ.29) ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ. ವಿಲ್ಲುಪುರಂ, ತಂಜಾವೂರು ಮತ್ತು ತಿರುಚಿ ಜಿಲ್ಲೆಗಳಲ್ಲಿ, ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!