ಉದಯವಾಹಿನಿ, ಬೆಂಗಳೂರು: ಇನ್ಮುಂದೆ ರಾಜಕಾರಣ ಇರಲ್ಲ, ಗೊಂದಲ ಬಂದ್, ಹೀಗಂತ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಜಂಟಿ ಒಪ್ಪಂದಕ್ಕೆ ಬಂದಿದ್ದಾರೆ. ಆದರೆ ಮೌಖಿಕ ಒಪ್ಪಂದಕ್ಕೆ ಎಲ್ಲಿಯವರೆಗೆ ಡಿಕೆಶಿ ಬದ್ಧರಾಗಿರುತ್ತಾರೆ ಎನ್ನುವ ಚರ್ಚೆ ಈಗ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಕುರ್ಚಿ ಕುಸ್ತಿಗೆ ತಾತ್ಕಾಲಿಕ ಬ್ರೇಕ್ ಏನೋ ಬಿದ್ದಿದೆ. ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಅಗ್ರಿಮೆಂಟ್ ಮಾಡಿಕೊಂಡಿದ್ದು, ಹೈಕಮಾಂಡ್ ನಿರ್ಣಯಕ್ಕೆ ಬದ್ಧವಾಗಿರಲು ಜಂಟಿ ಒಪ್ಪಂದಕ್ಕೆ ಬಂದಿದ್ದಾರೆ.
ಇನ್ಮುಂದೆ ನೋ ಪಾಲಿಟಿಕ್ಸ್, ಗೊಂದಲಗಳು ಬಂದ್ ಎಂದು ಮೌಖಿಕ ಶಪಥ ಮಾಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಕೈಗೊಂಡ ಈ ಒಡಂಬಡಿಕೆಯ ಬಾಳಿಕೆ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ-ಡಿಸಿಎಂ ಮಾಡಿಕೊಂಡಿರೋ ಈ ತಾತ್ಕಾಲಿಕ ಸಂಧಾನದ ಡೆಡ್‌ಲೈನ್ ಡಿಸೆಂಬರ್ ಮೂರನೇ ವಾರಕ್ಕೆ ಮುಗಿಯಲಿದೆ ಎನ್ನಲಾಗಿದೆ. ಹೆಚ್ಚು ಅಂದ್ರೆ ಕ್ರಿಸ್‌ಮಸ್‌ವರೆಗೆ ಡಿಕೆಶಿಯವರಿಗೆ ಈ ಸಂಧಾನ ಸಹನೆ ಇರಬಹುದೆಂದು ಎಣಿಸಲಾಗಿದೆ. ನಂತರ ಏನಾಗಲಿದೆ? ನಂತರವೂ ಡಿಕೆಶಿಯವರ ತಾಳ್ಮೆ ಹೀಗೆಯೇ ಉಳಿದಿರುತ್ತಾ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.
ರಾಜ್ಯ ಕಾಂಗ್ರೆಸ್ ಪಾಳಯದ ಗೊಂದಲಕ್ಕೆ ಹೈಕಮಾಂಡ್‌ಗೆ ಭಾರೀ ಕಸಿವಿಸಿ ತಂದಿತ್ತು. ಬ್ರೇಕ್‌ಫಾಸ್ಟ್ ಅಸ್ತ್ರ ಮೂಲಕ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಹೈಕಮಾಂಡ್ ಪಾರಾಗಿದೆ. ಬ್ರೇಕ್‌ಫಾಸ್ಟ್ ಒಪ್ಪಂದದಿಂದ ಸಿಎಂ ಸಿದ್ದರಾಮಯ್ಯ ತುಸು ನಿರಾಳವಾದರೆ, ಡಿಸಿಎಂಗೆ ಕಾಯುವ ಅಗ್ನಿಪರೀಕ್ಷೆ ಎದುರಾಗಿದೆ.
