ಉದಯವಾಹಿನಿ, ಕೊಡಗು: ದಕ್ಷಿಣ ಕಾಶ್ಮೀರ ಕೊಡಗು ಜಿಲ್ಲೆಯು ಈಗ ಚಳಿಗೆ ಮೈಯೊಡ್ಡಿ ನಿಂತಿದೆ. ಕಳೆದ ನಾಲ್ಕೈದು ದಿನಗಳಿಂದ ಜನರಿಗೆ ಚಳಿಯ ವಿಪರೀತ ಅನುಭವ ಉಂಟಾಗುತ್ತಿದೆ. ಜೊತೆಗೆ ಗಾಳಿ, ಆಗಾಗ್ಗೆ ತುಂತುರು ಮಳೆ ಮೈನಡುಗುವಂತೆ ಮಾಡುತ್ತಿದೆ. ಬೆಳಿಗ್ಗೆ, ಸಂಜೆ ವೇಳೆಯಲ್ಲಿ ಚಳಿ ದರ್ಬಾರ್ ಜೋರಾಗಿದ್ದು ನಿತ್ಯ ಕೆಲಸಗಳಿಗೆ ಜನ ರಜೆ ಹೇಳಬೇಕಾದ ಅನಿವಾರ್ಯತೆ ಬರುತ್ತಿದೆ.
ಹೌದು. ಕೊಡಗಿನಲ್ಲಿ ಮೈಕೊರೆಯುವ ಚಳಿಯಿಂದಾಗಿ ಬಹುತೇಕ ಜನ ನಿತ್ಯ ಕೆಲಸಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಸ್ವೆಟರ್, ಕಂಬಳಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಇದನ್ನೇ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರಿ ಆದಾಯ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಮಂಜಿನ ನಗರಿ ಮಡಿಕೇರಿ ಅಂದ್ರೇನೇ ಪ್ರವಾಸಿಗರ ಹಾಟ್‌ಸ್ಪಾಟ್ ಇಲ್ಲಿನ ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಮಧ್ಯದಲ್ಲಿ ಚಳಿ ಆವರಿಸಲಿದ್ದು, ಫೆಬ್ರವರಿ ಮಧ್ಯದ ವರೆಗೆ ಮುಂದುವರಿಯುತ್ತದೆ. ಆದ್ರೆ ಈ ಬಾರಿ ನವೆಂಬರ್ ಅಂತ್ಯದಿಂದಲೇ ಮೈಕೊರೆವ ಚಳಿಯ ವಾತಾವರಣ ಆರಂಭವಾಗಿದೆ. ಈ ಬಾರಿ ತಾಪಮಾನ ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೀಗಾಗಿ ಬೆಳಗ್ಗೆ ವಾಕಿಂಗ್‌ಗೆ ತೆರಳುವವರು ಹಾಸಿಗೆಯಲ್ಲಿ ಬೆಚ್ಚನೆಯ ನಿದ್ರೆಗೆ ತಲೆಗೊಡುತ್ತಿದ್ದಾರೆ. ಹಾಲು, ಪೇಪರ್ ವಿತರಕರಿಗೂ ಕೆಲಸ ಮಾಡೋದು ಸವಾಲೇ ಆಗಿದೆ.
