ಉದಯವಾಹಿನಿ, ನವದೆಹಲಿ: ಇನ್ನು ಮುಂದೆ ಮೊಬೈಲಿನಲ್ಲಿ ಸಕ್ರಿಯವಾಗಿರುವ ಸಿಮ್ ಇದ್ದರೆ ಮಾತ್ರ ಮೆಸೇಜಿಂಗ್ ಅಪ್ಲಿಕೇಶನ್‌ಗಳು ತೆರೆದುಕೊಳ್ಳಲಿದೆ.ಹೌದು. ಬಳಕೆದಾರರ ಮೊಬೈಲ್‌ನಲ್ಲಿ ಸಕ್ರಿಯವಾಗಿರುವ ಸಿಮ್ ಇದ್ದಾಗ ಮಾತ್ರ ವಾಟ್ಸಪ್ ಸೇರಿದಂತೆ ಆ್ಯಪ್ ಆಧಾರಿತ ಸಂವಹನ ಸೇವೆ ಕಾರ್ಯನಿರ್ವಹಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತಂತೆ 120 ದಿನಗಳೊಳಗಾಗಿ ದೂರಸಂಪರ್ಕ ಇಲಾಖೆಗೆ ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ವರದಿ ಸಲ್ಲಿಸಲು ವಿಫಲವಾದಲ್ಲಿ ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಪ್ ಆಧಾರಿತ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಯಾಕೆ ಈ ಕ್ರಮ?
ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್‌ನಂತಹ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಆರಂಭದದಲ್ಲಿ ಸಿಮ್ ಮೂಲಕ ಒಟಿಪಿ ಪಡೆದು ಲಾಗಿನ್ ಆಗುತ್ತದೆ. ಒಂದು ಬಾರಿ ಲಾಗಿನ್ ಆದ ಬಳಿಕ ಸಿಮ್ ಕಾರ್ಡ್ ಮೊಬೈಲ್‌ನಲ್ಲಿ ತೆಗೆದರೂ ಅದು ಸಕ್ರಿಯವಾಗಿರುತ್ತದೆ. ಈ ರೀತಿ ಸಿಮ್ ಸಕ್ರಿಯವಾಗಿರುವುದು ಸೈಬರ್ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿದೆ. ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧಿಗಳು, ಸಿಮ್‌ಗಳನ್ನು ಬದಲಾಯಿಸಿದ ಅಥವಾ ನಿಷ್ಕ್ರಿಯಗೊಳಿಸಿದ ನಂತರವೂ ಈ ಅಪ್ಲಿಕೇಶನ್‌ಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದಾರೆ. ಇದರಿಂದಾಗಿ ಕರೆ ದಾಖಲೆಗಳು, ಸ್ಥಳ ದಾಖಲೆಯ ಮೂಲಕ ವಂಚನೆಯ ಚಟುವಟಿಕೆಯನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ. ಈ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ನಿಯಮವನ್ನು ಬಿಗಿಗೊಳಿಸುತ್ತಿದೆ.
