ಉದಯವಾಹಿನಿ, ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿ ರೇಡಿಯೋ ಕಾರ್ಯಕ್ರಮದ ಮನ್ ಕಿ ಬಾತ್‌ನ 128ನೇ ಸಂಚಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಭಾರತೀಯ ನೌಕಾಪಡೆಯ ಹೆಮ್ಮೆಯ ಯುದ್ಧನೌಕೆಯ ಮ್ಯೂಸಿಯಂ ಐಎನ್ಎಸ್ ಚಾಪೆಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ.ದೇಶದಲ್ಲಿ ಪ್ರವಾಸೋದ್ಯಮ ಹಾಗೂ ರಾಷ್ಟ್ರಭಕ್ತಿ ಬೆಳೆಸುವ ಉದ್ದೇಶದಿಂದ ನೌಕಾನೆಲೆಗೆ ಸಂಬಂಧಿಸಿದ ಕಾರವಾರ ಸೇರಿದಂತೆ ವಿವಿಧ ಮ್ಯೂಸಿಯಂಗಳಿಗೆ ಭೇಟಿ ನೀಡಿ ಎಂದು ಜನರಿಗೆ ಮೋದಿ ಕರೆ ನೀಡಿದ್ದಾರೆ.
ಅಂದಹಾಗೆ, ರಷ್ಯಾ ನಿರ್ಮಿತ ಈ ಯುದ್ಧನೌಕೆ 1976 ರಲ್ಲಿ ವಿಶಾಖಪಟ್ಟಣಂ ನೌಕಾನೆಲೆಗೆ ಆಗಮಿಸಿತ್ತು. ಸುಮಾರು 375 ಟನ್ ತೂಕದ ಯುದ್ಧನೌಕೆ ಸಾಕಷ್ಟು ವಿಶೇಷತೆಯನ್ನು ಹೊಂದಿತ್ತು. ಗಂಟೆಗೆ 70 ಕಿಲೋಮೀಟರ್ ವೇಗವಾಗಿ ಸಾಗುವ ಶಕ್ತಿ ಹೊಂದಿದ್ದ ಚಾಪೆಲ್ ಯುದ್ಧನೌಕೆಯಲ್ಲಿ ನಾಲ್ಕು ಕ್ಷಿಪಣಿನಾಶಕ ಹಾಗೂ 2 ವಿಮಾನ ನಾಶಕಗಳು ಸದಾ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇನ್ನು 4 ಕಿಲೋಮೀಟರ್ ದೂರದ ವಿಮಾನಗಳನ್ನು ಹೊಡೆದುರುಳಿಸುವ ಶಕ್ತಿ ಇದ್ದ ಚಾಪೆಲ್ ಯುದ್ಧನೌಕೆ ಸತತವಾಗಿ 29 ವರ್ಷಗಳ ಕಾಲ ಕಡಲಿನಲ್ಲಿ ದೇಶ ರಕ್ಷಣೆಗಾಗಿ ಸೇವೆಯನ್ನು ಸಲ್ಲಿಸಿತ್ತು.
ಕಳೆದ 2005ರಲ್ಲಿ ತನ್ನ ಸೇವೆಯಿಂದ ನಿವೃತ್ತಿಯಾಗಿದ್ದ ಈ ಚಾಪೆಲ್ ನೌಕೆಯನ್ನು ನಂತರ ಕಾರವಾರಕ್ಕೆ ಕೊಡಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾಪೆಲ್ ಯುದ್ದ ನೌಕೆಯನ್ನು ಪಡೆದ ಉತ್ತರ ಕನ್ನಡ ಜಿಲ್ಲಾಡಳಿತ ವಾರ್‌ಶಿಪ್ ಮ್ಯೂಸಿಯಂ (Warship Museum) ಆಗಿ ಪರಿವರ್ತನೆ ಮಾಡಿದೆ. ಐಎನ್ಎಸ್ ಚಾಪೆಲ್ ಯುದ್ಧನೌಕೆ 2006ರ ನ.7 ರಂದು ಕಾರವಾರದ ಟ್ಯಾಗೂರ್ ಕಡಲತೀರಕ್ಕೆ ಕಾಲಿಟ್ಟು ಸಾರ್ವಜನಿಕ ವೀಕ್ಷಣೆಗೆ ಮ್ಯೂಸಿಯಂ ಮೂಲಕ ತನ್ನ ಕಾರ್ಯವನ್ನು ಪ್ರಾರಂಭಿಸಿತ್ತು. ಕಾರವಾರಕ್ಕೆ ನೌಕೆ ತಂದು ಸಾಕಷ್ಟು ವರ್ಷಗಳಾಗಿದ್ದು, ಇದರ ನಿರ್ವಹಣೆಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಸುಮಾರು 45 ಲಕ್ಷ ರೂ. ವೆಚ್ಚ ಮಾಡಿ ನೌಕೆಯನ್ನು ಮತ್ತೆ ರಿಪೇರಿ ಮಾಡುವ ಕೆಲಸ ಮಾಡಿದೆ.
