ಉದಯವಾಹಿನಿ, ಉಜ್ಜಯಿನಿ: ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಪುತ್ರ ಅಭಿಮನ್ಯು ಯಾದವ್ ಅವರು ಭಾನುವಾರ ಇಶಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಉಜ್ಜಯಿನಿಯ ಸನ್ವರ್ಖೇಡಿಯಲ್ಲಿ ನಡೆದ ಅದ್ಧೂರಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅಭಿಮನ್ಯು ಯಾದವ್ ಮತ್ತು ಇಶಿತಾ ಅವರೊಂದಿಗೆ ಇತರ 21 ಜೋಡಿಗಳು ವಿವಾಹವಾದರು. ಈ ಸಮಾರಂಭದಲ್ಲಿ ಆಧ್ಯಾತ್ಮಿಕ ನಾಯಕರು, ರಾಜಕೀಯ ಗಣ್ಯರು ಮತ್ತು ಸಾವಿರಾರು ಅತಿಥಿಗಳು ಉಪಸ್ಥಿತರಿದ್ದರು.ವಿವಾಹ ಮಂಟಪಕ್ಕೆ ಅಭಿಮನ್ಯು ಯಾದವ್ ಅವರು ಕುದುರೆ ಏರಿ ಬಂದರೆ ಇಶಿತಾ ಅವರು ಎತ್ತಿನ ಬಂಡಿಯಲ್ಲಿ ಬಂದರು. ದೊಡ್ಡದಾಗಿ ನಿರ್ಮಿಸಲಾಗಿದ್ದ ಮದುವೆ ಮಂಟಪವನ್ನು ವಿವಿಧ ಬಣ್ಣಗಳ ಹೂವುಗಳಿಂದ ಅಲಂಕರಿಸಲಾಗಿತ್ತು.
ವಿವಾಹದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಭಿಮನ್ಯು ಯಾದವ್, ಸಾಮೂಹಿಕ ಸಮಾರಂಭದಲ್ಲಿ ಮದುವೆಯಾಗುವುದು ದುಪ್ಪಟ್ಟು ಖುಷಿಯನ್ನು ಕೊಟ್ಟಿದೆ. ಇಂತಹ ಭವ್ಯ ಕಾರ್ಯಕ್ರಮ ತುಂಬಾ ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಮುಂದಿನ ಸಂತೋಷದ ಜೀವನಕ್ಕಾಗಿ ನಾನು ಬಾಬಾ ಮಹಾಕಾಲ್ ಅವರನ್ನು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
