ಉದಯವಾಹಿನಿ, ಶ್ರೀಲಂಕಾ: ದ್ವಿತಾ ಚಂಡಮಾರುತದ ಪರಿಣಾಮ ಸಂಕಷ್ಟದಲ್ಲಿರುವ ಶ್ರೀಲಂಕಾದ ಜನತೆಯ ನೆರವಿಗೆ ಭಾರತ ಧಾವಿಸಿದೆ. ಈಗಾಗಲೇ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದ್ದು, ಭಾರತದಿಂದ ರಕ್ಷಣಾ ಸಿಬ್ಬಂದಿ (rescue teams) ಕೂಡ ಧಾವಿಸಿದ್ದಾರೆ. ಚಂಡಮಾರುತದ ಪರಿಣಾಮವಾಗಿ ದೇಶಾದ್ಯಂತ ಸುಮಾರು 153 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಶ್ರೀಲಂಕಾದ ಜನತೆಯ ನೆರವಿಗೆ ಧಾವಿಸಿರುವ ಭಾರತ ಶನಿವಾರ ಶ್ರೀಲಂಕಾಕ್ಕೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿಕೊಟ್ಟಿದೆ. ಇದರೊಂದಿಗೆ ಆಹಾರ ಸಾಮಗ್ರಿಗಳು, ಟೆಂಟ್‌ಗಳು ಮತ್ತು ಕಂಬಳಿಗಳಂತಹ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಶ್ರೀಲಂಕಾದ ನೆರವಿಗೆ ಧಾವಿಸಿರುವ ಭಾರತೀಯ ವಾಯುಪಡೆಯ (IAF) Il-76 ಸಾರಿಗೆ ವಿಮಾನವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಯ 80 ಸಿಬ್ಬಂದಿಯನ್ನು ಕರೆದೊಯ್ದಿದೆ. ಇದರೊಂದಿಗೆ ಎರಡು ನಗರ ಶೋಧ ಮತ್ತು ರಕ್ಷಣಾ ತಂಡಗಳು, ಒಂಬತ್ತು ಟನ್ ಪರಿಹಾರ ಸಾಮಗ್ರಿಗಳನ್ನು ಕೂಡ ‘ಆಪರೇಷನ್ ಸಾಗರ್ ಬಂಧು’ ಭಾಗವಾಗಿ ಕೊಲಂಬೊಗೆ ಸಾಗಿಸಿದೆ ಎಂದು ಹೇಳಿದ್ದಾರೆ.
