ಉದಯವಾಹಿನಿ, ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ರನ್‌ವೇ 10ರ ಕಡೆಗೆ ಜಿಪಿಎಸ್ ಆಧಾರಿತ ಲ್ಯಾಂಡಿಂಗ್ ವಿಧಾನದಲ್ಲಿ ಬರುತ್ತಿರುವ ಕೆಲವು ವಿಮಾನಗಳು ಜಿಪಿಎಸ್ ಸ್ಪೂಫಿಂಗ್‌ಗೆ ಒಳಗಾಗಿವೆ. ಈ ವಿಮಾನಗಳಿಗೆ ತುರ್ತು ಪರಿಸ್ಥಿತಿ ಕಾರ್ಯವಿಧಾನಗಳನ್ನು ಬಳಸಲಾಗಿದೆ. ಆದರೆ ಇತರ ರನ್‌ವೇಗಳಲ್ಲಿ ಸಾಂಪ್ರದಾಯಿಕ ನ್ಯಾವಿಗೇಷನ್ ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿರುವುದರಿಂದ ವಿಮಾನಗಳ ಚಲನೆಯ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾಗುತ್ತಿರುವ ಜಿಪಿಎಸ್ ಸ್ಪೂಫಿಂಗ್ ಸಮಸ್ಯೆಯ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ರಾಜ್ಯಸಭೆಯಲ್ಲಿ ಉತ್ತರ ನೀಡಿದರು.
ಈ ಸಮಸ್ಯೆಯನ್ನು ಎದುರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಐಜಿಐ ವಿಮಾನ ನಿಲ್ದಾಣದ ಸುತ್ತಮುತ್ತ ಜಿಪಿಎಸ್ ಸ್ಪೂಫಿಂಗ್/ ಜಿಎನ್‌ಎಸ್‌ಎಸ್ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್) ತೊಂದರೆಗಳ ತಕ್ಷಣದ ವರದಿ ಮಾಡುವ ಉದ್ದೇಶದಿಂದ ನ.10ರಂದು ಪ್ರಮಾಣಿತ ಕಾರ್ಯವಿಧಾನ ಬಿಡುಗಡೆ ಮಾಡಲಾಗಿದೆ. ವಿಮಾನ ನಿಲ್ದಾಣಗಳ ಪ್ರಾಧಿಕಾರ ವೈರ್‌ಲೆಸ್ ಮಾನಿಟರಿಂಗ್ ಸಂಸ್ಥೆಯನ್ನು ಸಂಪರ್ಕಿಸಿ ತೊಂದರೆಯ ಮೂಲವನ್ನು ಪತ್ತೆಹಚ್ಚುವಂತೆ ಕೋರಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!