ಉದಯವಾಹಿನಿ, ಹೈದರಾಬಾದ್ : ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್‌ ತನ್ನ ಮುಂಚೂಣಿ ಭದ್ರತಾ ಸೇವೆಗಳಿಗೆ 20 ತೃತೀಯ ಲಿಂಗಿ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಘೋಷಿಸಿದೆ. ಇದು ಸಾಮಾಜಿಕ ಸಬಲೀಕರಣ ಮತ್ತು ಪ್ರಯಾಣಿಕರ ಭದ್ರತೆ ಹೆಚ್ಚಿಸುವತ್ತ ಪ್ರಮುಖ ಹೆಜ್ಜೆ ಎನಿಸಿಕೊಂಡಿದೆ. ಆ ಮೂಲಕ ಹೊಡದೊಂದು ಕ್ರಾಂತಿಗೆ ಮುನ್ನುಡಿ ಬರೆದಿದೆ. ತಮ್ಮ ಭದ್ರತಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹೊಸದಾಗಿ ನೇಮಕಗೊಂಡ ಅವರು ಆಯ್ಕೆಯಾದ ಮೆಟ್ರೋ ನಿಲ್ದಾಣಗಳು ಮತ್ತು ಮೆಟ್ರೋ ರೈಲುಗಳಲ್ಲಿ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಮಹಿಳೆಯರ ಭದ್ರತೆ ಗಮನಾರ್ಹವಾಗಿ ಹೆಚ್ಚಾಗಿದೆ.

ಭಾರತದ ಅತಿದೊಡ್ಡ ಮತ್ತು ಅತ್ಯಂತ ಮುಂದುವರಿದ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾದ ಹೈದರಾಬಾದ್ ಮೆಟ್ರೋ ರೈಲು, 57 ನಿಲ್ದಾಣಗಳೊಂದಿಗೆ ಮೂರು ಕಾರಿಡಾರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಸುಮಾರು 5 ಲಕ್ಷ ದೈನಂದಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ. ಈ ಪ್ರಯಾಣಿಕರ ಸುಮಾರು ಶೇ. 30ರಷ್ಟು ಮಹಿಳೆಯರು ಆಗಿರುವುದರಿಂದ, ಅವರ ಸುರಕ್ಷತೆ, ಸೌಕರ್ಯ ಮತ್ತು ಆತ್ಮವಿಶ್ವಾಸವನ್ನು ಖಚಿತಪಡಿಸುವುದು HMRL‌ಗೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ.

​ಈ ಕ್ರಮವು ತೆಲಂಗಾಣ ಸರ್ಕಾರದ ಅಂಚಿನಲ್ಲಿರುವ ಸಮುದಾಯಗಳಿಗೆ ಗೌರವ, ಘನತೆ ಮತ್ತು ಸಮಾನ ಅವಕಾಶದ ವಿಶಾಲ ಬದ್ಧತೆಗೆ ಸಾಕ್ಷಿ ಎನಿಸಿಕೊಂಡಿದೆ. ಕಳೆದ ವರ್ಷ ಸರ್ಕಾರವು ತೃತೀಯ ಲಿಂಗಿ ವ್ಯಕ್ತಿಗಳನ್ನು ಸಹಾಯಕ ಸಂಚಾರ ಮಾರ್ಷಲ್‌ಗಳಂತಹ ವಿವಿಧ ಸಾರ್ವಜನಿಕ ಸೇವಾ ವಲಯಗಳಿಗೆ ಸೇರಿಸುವ ನೀತಿಯನ್ನು ಜಾರಿಗೆ ತರಲು ಪ್ರಾರಂಭಿಸಿತ್ತು. ತೃತೀಯ ಲಿಂಗಿ ಸಿಬ್ಬಂದಿಯ ನಿಯೋಜನೆ, ಸುರಕ್ಷಿತ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣವನ್ನು ನಿರ್ಮಿಸುವ HMRL‌ನ ಧ್ಯೇಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ನೇಮಕಾತಿ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗಾಗಿ, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಅದಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!