ಉದಯವಾಹಿನಿ, ಲಖನೌ : ಇತ್ತೀಚಿನ ದಿನದಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ದಂಪತಿ ದೂರಾಗುವ ಪ್ರಮಾಣ ಹೆಚ್ಚಾಗುತ್ತಿದೆ. ಮದುವೆಯಾದ ಬಳಿಕ ದಂಪತಿ ನಡುವೆ ವೈಮನಸ್ಸು ಬಂದು ದೂರಾಗುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ನವವಿವಾಹಿತೆ ಮದುವೆಯಾದ ದಿನವೇ ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತನ್ನ ತವರು ಮನೆಗೆ ವಾಪಾಸಾದ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ವಧುವಿನ ಒಪ್ಪಿಗೆಯಿಂದಲೇ ಈ ಮದುವೆ ಮಾಡಿಸಲಾಗಿದ್ದರೂ ಆಕೆ ಮಾತ್ರ ಗಂಡನ ಮನೆಗೆ ತಲುಪುತ್ತಿದ್ದಂತೆ ಉಲ್ಟಾ ಹೊಡೆದಿದ್ದಾಳೆ. ಮದುವೆಯಾಗಿ ಗಂಡನ ಮನೆ ತಲುಪಿ ಕೇವಲ 20ನಿಮಿಷಕ್ಕೆ ಮದುವೆ ಸಂಬಂಧ ಮುರಿದು ಬಿದ್ದಿದ್ದು, ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾಲುವಾನಿ ಮೂಲದ ವಿಶಾಲ್ ಮಧೇಸಿಯಾ ಅವರಿಗೆ ಸಲೆಂಪುರದ ಪೂಜಾ ಜತೆ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ವಿವಾಹ ನಿಶ್ಚಯವಾಗಿತ್ತು. ವರ ವಿಶಾಲ್ ತನ್ನ ತಂದೆಯ ಜನರಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ತಿಳಿದೇ ಪೂಜೆ ಮದುವೆ ಒಪ್ಪಿಕೊಂಡಿದ್ದಾಳೆ. ಹೀಗೆ ಆಕೆಯ ಸಮ್ಮತಿ ಮೇರೆಗೆ ಮದುವೆ ನೆರವೇರಿದೆ. ನವೆಂಬರ್ 25 ವಿವಾಹವಾಗಿದ್ದು, ವಧು ವರನ ಮನೆಗೆ ತಲುಪುತ್ತಿದ್ದಂತೆ ಕೆಲವು ಶಾಸ್ತ್ರ ಕೂಡ ಮಾಡಲಾಗಿದೆ. ಬಳಿಕ ಅವಳನ್ನು ವರನ ರೂಮ್‌ಗೆ ಕಳುಹಿಸಲಾಗಿದ್ದು ಬರೀ 20ನಿಮಿಷಕ್ಕೆ ಅವಳು ಕೋಣೆಯಿಂದ ಹೊರಬಂದು ತನ್ನ ಪತಿಯೊಂದಿಗೆ ವಾಸಿಸುವುದಿಲ್ಲ ಎಂದು ಹೇಳಿದ್ದಾಳೆ.
