
ಉದಯವಾಹಿನಿ, ದಾವಣಗೆರೆಯ ಮುದೇಗೌಡ್ರು ನವೀನ್ ಕುಮಾರ್ ಆರ್.ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ಅವರ ನಿರ್ಮಾಣದಲ್ಲಿ ಕಾರ್ಕಳದ ನಾಗರಾಜ್ ಶಂಕರ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಮೂಡಿಬಂದಿರುವ `ಮರಳಿ ಮನಸಾಗಿದೆ’ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಗೆ ಇಂದು ದಾವಣಗೆರೆ ಜನತೆ ಸಾಕ್ಷಿಯಾದರು. ಕರುನಾಡ ಸಮರ ಸೇನೆ ಇದಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಶ್ರೀ ವೀರಭದ್ರ ಸ್ವಾಮಿ ಸನ್ನಿಧಾನದಲ್ಲಿ `ಮರಳಿ ಮನಸಾಗಿದೆ’ ಚಿತ್ರದ ಮಹೂರ್ತದಿಂದ ಶುಭಾರಂಭಗೊಂಡು ಜಿಲ್ಲೆ ಮತ್ತು ನಾಡಿನ ಪ್ರಮುಖ ತಾಣಗಳಲ್ಲಿ ಚಿತ್ರೀಕರಣಗೊಂಡು ತೆರೆಗೆ ಸಿದ್ಧವಾಗಿ, ಟೀಸರ್ ದಾವಣಗೆರೆಯಲ್ಲಿಯೇ ಬಿಡುಗಡೆಯಾಗಿರುವುದು ಕನ್ನಡಿಗರು ಹೆಮ್ಮೆಪಡುವ ವಿಚಾರವಾಗಿದೆ ಎಂದರು.
ಯುವ ಪೀಳಿಗೆಗೆ ಭಾವನೆಗಳನ್ನು ಬೆಸೆಯುವಂತಹದ್ದು, ಮನಸ್ಸನ್ನು, ಬುದ್ದಿಯನ್ನು ಸ್ವಾಸ್ಥಗೊಳಿಸುವಂತಹದ್ದು, ಜೊತೆಗೆ ಸ್ವಾಸ್ಥ್ಯ ಬದುಕಿನೆಡೆಗೆ ಸಾಗುವಂತಹ ಸಂದೇಶವನ್ನು ಸಾರುವ ಚಿತ್ರ ನಿರ್ಮಾಣಗೊಂಡಿರುವುದು ಸಂತಸ ಉಂಟುಮಾಡಿದೆ. ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೇರವಾಗಿ ಚಿತ್ರಮಂದಿರಗಳಿಗೆ ಹೋಗಿ ನೋಡುವಂತೆ ಕರೆ ನೀಡಿದರು. ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, `ಮರಳಿ ಮನಸಾಗಿದೆ’ ಚಿತ್ರ ಶತದಿನೋತ್ಸವ ಆಚರಿಸುವ ಜೊತೆಗೆ ಪ್ಯಾನ್ ಇಂಡಿಯಾ ಖ್ಯಾತಿ ಗಳಿಸುವ ಚಿತ್ರಗಳನ್ನು ನಿರ್ಮಾಣ ಮಾಡಲಿ, ಚಿತ್ರದ ನಟ-ನಟಿಯರು ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಮಿಂಚಲಿ ಎಂದು ಶುಭ ಹಾರೈಸಿದರು. ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು, ಚಿತ್ರದ ಟೀಸರ್ ಗಮನಿಸಿದರೆ ಯುವ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಯುವಕರಲ್ಲಿ ಉತ್ಸಾಹ ಮೂಡಿಸುವ ಚಿತ್ರ ಇದಾಗಿದೆ ಎಂದರು.
