ಉದಯವಾಹಿನಿ, : ಪುನಶ್ಚತನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದ ವೇಗಿಗಳಾದ ಜೋಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್‌)ಆರಂಭಿಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಕೋಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಹೇಝಲ್‌ವುಡ್, ನಿರಂತರವಾಗಿ ಕಾಡುತ್ತಿರುವ ಮಂಡಿರಜ್ಜು ಹಾಗೂ ಸ್ನಾಯುರಜ್ಜು ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬಲಗೈ ವೇಗದ ಬೌಲ‌ರ್ ಕಮಿನ್ಸ್ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಆಡಲಿರುವ ಕನಿಷ್ಠ ಮೊದಲೆರಡು ಪಂದ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಸುಮಾರು ಐದು ತಿಂಗಳ ಹಿಂದೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವಿಕ್ಟೋರಿಯ ತಂಡವನ್ನು ನ್ಯೂ ಸೌತ್ ವೇಲ್ಸ್ ಶೀಫೀಲ್ಡ್ ಶೀಲ್ಡ್ ತಂಡ ಸೋಲಿಸಿದ ನಂತರ ಹೇಝಲ್‌ವುಡ್‌ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ.
2025ರ ಆವೃತ್ತಿಯ ಆಟಗಾರರ ಹರಾಜಿನ ವೇಳೆ ಅರ್‌ಸಿಬಿ ಫ್ರಾಂಚೈಸಿಯು 12.5 ಕೋ.ರೂ.ಗೆ ಹೇಝಲ್‌ವುಡ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಇದರಿಂದ ಭರಪೂರ ಲಾಭ ಪಡೆದಿತ್ತು. ಹೇಝಲ್‌ವುಡ್ 12 ಪಂದ್ಯಗಳಲ್ಲಿ 17.54ರ ಸರಾಸರಿಯಲ್ಲಿ, 8.77ರ ಇಕಾನಮಿ ರೇಟ್‌ನಲ್ಲಿ ಒಟ್ಟು 22 ವಿಕೆಟ್‌ಗಳನ್ನು ಉರುಳಿಸಿ ಫ್ರಾಂಚೈಸಿಯು ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ವೇಳೆ, ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕಮಿನ್ಸ್ ಅವರು ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದು ಮಾರ್ಚ್ 28ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿರುದ್ಧ ತನ್ನ ತಂಡ ಆಡಲಿರುವ ಉದ್ಘಾಟನಾ ಪಂದ್ಯದಿಂದ ವಂಚಿತರಾಗಲಿದ್ದಾರೆ. ಕಮಿನ್ಸ್‌ ಪುನರಾಗಮನ ಕುರಿತು ಅನಿಶ್ಚಿತತೆ ಇರುವ ಕಾರಣ ಇಶಾನ್ ಕಿಶನ್ ಪಂದ್ಯಾವಳಿಯ ಆರಂಭಿಕ ಹಂತದಲ್ಲಿ ಎಸ್‌ಆರ್‌ಎಚ್ ತಂಡವನ್ನು ನಾಯಕನಾಗಿ ಮುನ್ನಡೆಸುವ ನಿರೀಕ್ಷೆ ಇದೆ.
ಕಮಿನ್ಸ್ ಒಟ್ಟು 72 ಐಪಿಎಲ್ ಪಂದ್ಯಗಳನ್ನಾಡಿದ್ದು, 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಎಸ್‌ಆರ್‌ಎಚ್‌ ಪರ 30 ಪಂದ್ಯಗಳನ್ನು ಆಡಿ ಒಟ್ಟು 34 ವಿಕೆಟ್‌ಗಳನ್ನು ಉರುಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!