ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸ ಕ್ಷೇತ್ರದ ವಿಸ್ತರಣೆಯನ್ನು ಗುರಿಯಾಗಿ ಇಟ್ಟುಕೊಂಡು 150 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ಹಾಗೂ ಹೂಡಿಕೆ ಸಾಧ್ಯವಾಗುವಂತೆ ವಿಷನ್ ಡಾಕ್ಯುಮೆಂಟ್ ತಯಾರಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆ ವಿಸ್ತೃತ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಯನ್ನು ಘೋಷಿಸಿದೆ. ಇದಕ್ಕೆ ಸಮಾನಾಂತರವಾಗಿ ರಾಜ್ಯ ಸರ್ಕಾರವು ಕೂಡ ಒಂದು ಯೋಜನೆಯನ್ನು ರೂಪಿಸಲು ಚಿಂತಿಸುತ್ತಿದ್ದು, ಇದರ ಕಾರ್ಯಸಾಧ್ಯತೆಯನ್ನು ಕುರಿತು ಅಧ್ಯಯನ ಮಾಡುತ್ತಿದೆ. ಇದು ಕರಡು ಹಂತದಲ್ಲಿದ್ದು, ಇದಕ್ಕೆ ಐಸಿಇಎ ನೀಡುವ ಸಲಹೆಗಳನ್ನು ಸ್ವಾಗತಿಸಲಾಗುವುದು ಎಂದರು.
ಮೊಬೈಲ್ ಫೋನ್ ಬಿಡಿಭಾಗಗಳು ಮಾತ್ರವಲ್ಲದೆ ಕೈಗಾರಿಕಾ ಎಲೆಕ್ಟ್ರಾನಿಕ್ಸ್, ಕಾರ್ಯತಂತ್ರ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೂಡ ಅಪಾರ ಅವಕಾಶಗಳಿವೆ. ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಯೋಜನೆ ಮತ್ತು ಇತರ ರಾಜ್ಯಗಳಲ್ಲಿ ಇರುವ ಇಂತಹ ಯೋಜನೆಗಳ ಅಧ್ಯಯನ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!