ಉದಯವಾಹಿನಿ, ವಾಷಿಂಗ್ಟನ್: ತರಬೇತಿ ಕಾರ್ಯಾಚರಣೆ ವೇಳೆ ಕ್ಯಾಲಿಪೋರ್ನಿಯದ ಟ್ರೋನಾ ವಿಮಾನ ನಿಲ್ದಾಣದ ಬಳಿ ಅಮೆರಿಕಾ ವಾಯುಪಡೆಯ ಎಲೈಟ್ ಥಂಡರ್‌ಬರ್ಡ್ಸ್ ಸ್ಕ್ವಾಡ್ರನ್‌ನ ಎಫ್-16 ಫೈಟರ್ ಜೆಟ್ ಪತನಗೊಂಡಿದೆ. ಬ್ಲಾಸ್ಟ್ ಆಗುವ ಮುನ್ಸೂಚನೆ ಕಂಡ ಕೂಡಲೇ ಪೈಲೆಟ್ ಹೊರಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಪೈಲೆಟ್ ಹೊರಬಂದ ಕೆಲವೇ ಕ್ಷಣಗಳಲ್ಲಿ ವಿಮಾನ ಸ್ಪೋಟಗೊಂಡಿದ್ದು, ಬೆಂಕಿಯಿಂದ ಧಗಧಗ ಹೊತ್ತಿ ಹುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಮೆರಿಕಾ ಸೈನ್ಯ ಘಟನೆಯ ದೃಶ್ಯಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಡೆತ್ ವ್ಯಾಲಿಯ ದಕ್ಷಿಣಭಾಗದ ಮರಭೂಮಿಯ ಪ್ರದೇಶದಲ್ಲಿ ವಿಮಾನವು ಲ್ಯಾಂಡಿಂಗ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಜೆಟ್ ಸ್ಪೋಟಗೊಂಡ ವೇಳೆ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿರುವುದು ಕಂಡುಬಂದಿದೆ.
ಸರಿಸುಮಾರು 10:45ಕ್ಕೆ (ಅಲ್ಲಿನ ಸ್ಥಳೀಯ ಗಡಿಯಾರದ ಪ್ರಕಾರ) ಕ್ಯಾಲಿಪೋರ್ನಿಯಾದಲ್ಲಿ ನಿಯಂತ್ರಿತ ವಾಯುಪ್ರದೇಶದ ಮೇಲೆ ತರಬೇತಿ ಕಾರ್ಯಾಚರಣೆ ವೇಳೆ ಘಟನೆ ನಡೆದಿದೆ. ಪೈಲಟ್ ಎಫ್ 16 ಸಿ ಫೈಟಿಂಗ್ ಪಾಲ್ಕನ್ ವಿಮಾನದಿಂದ ಸುರಕ್ಷಿತವಾಗಿ ಹೊರಜಿಗಿದಿದ್ದಾರೆ ಎಂದು ಥಂಡರ್‌ಬರ್ಡ್ಸ್ ಧೃಡಪಡಿಸಿದೆ. ಇನ್ನು ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಯಾನ್ ಬರ್ನಾರ್ಡಿನೊ ಕೌಂಟಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವಿಮಾನದಲ್ಲಿ ಪೈಲಟ್ ಒಬ್ಬರೇ ಇದ್ದರು. ಅವರು ಹೊರಬಂದ ಕೂಡಲೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು. ಸದ್ಯ ಬೆಂಕಿಯಿಂದ ಸ್ಥಳದಲ್ಲಿ ಯಾವುದೇ ತೊಂದರೆಗಳಾಗಿಲ್ಲ ಎಂದು ಹೇಳಿದ್ದಾರೆ.
