ಉದಯವಾಹಿನಿ, ನ್ಯೂಯಾರ್ಕ್: 2017ರಲ್ಲಿ ಭಾರತೀಯ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗನ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಬೇಕಾಗಿರುವ ಭಾರತೀಯ ಪ್ರಜೆಯ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ಅಮೆರಿಕನ್ ಡಾಲರ್ ನೀಡುವುದಾಗಿ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಘೋಷಿಸಿದೆ. ಜೊತೆಗೆ, ಶಂಕಿತನನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೂ ಮನವಿ ಮಾಡಿದೆ. 2017ರ ಮಾರ್ಚ್‌ನಲ್ಲಿ ನ್ಯೂಜೆರ್ಸಿಯ ಮೇಪಲ್ ಶೇಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶಶಿಕಲಾ ನರ (38) ಮತ್ತು ಅವರ ಮಗ ಅನೀಶ್ ನರ ಅವರನ್ನು ಕೊಲೆ ಮಾಡಿದ ಆರೋಪವನ್ನು 38 ವರ್ಷದ ನಜೀರ್ ಹಮೀದ್ ವಿರುದ್ಧ ಹೊರಿಸಲಾಗಿದೆ. 2025ರ ಫೆಬ್ರವರಿಯಲ್ಲಿ ಆರೋಪಿ ಹಮೀದ್ ವಿರುದ್ಧ ಕೊಲೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣ ದಾಖಲಿಸಲಾಗಿದೆ.
ಹತ್ಯೆ ನಡೆದ 6 ತಿಂಗಳ ನಂತರ ಹಮೀದ್ ಭಾರತಕ್ಕೆ ಮರಳಿದ್ದಾನೆ. ಇಂದಿಗೂ ಆತ ಅಲ್ಲಿಯೇ ಇದ್ದಾನೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದು, ಹತ್ಯೆಯಾದ ಮಹಿಳೆಯ ಪತಿ ಮತ್ತು ಆತನ ತಂದೆಯನ್ನು ಹಮೀದ್ ಹಿಂಬಾಲಿಸಿದ್ದು ಕಂಡುಬಂದಿದೆ. ಹೀಗಾಗಿ ಆತನನ್ನು ಶಂಕಿತ ಕೊಲೆಗಾರನಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ. ಆರೋಪಿಯ ಸುಳಿವು ನೀಡಿದಲ್ಲಿ 50 ಸಾವಿರ ಯುಎಸ್ ಡಾಲರ್ ನೀಡುವುದಾಗಿ ಎಫ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇಬ್ಬರ ಹತ್ಯೆಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆರೋಪಿ ಹಮೀದ್‌ನನ್ನು ವಿಚಾರಣೆಗೆ ಒಳಪಡಿಸಲು ಅಮೆರಿಕಕ್ಕೆ ಮರಳಿ ಕರೆತರಬೇಕಾಗಿದೆ. ಆತನನ್ನು ನಮಗೆ ಹಸ್ತಾಂತರಿಸಿ ಎಂದು ನ್ಯೂಜೆರ್ಸಿ ಗವರ್ನರ್ ಫಿಲ್ ಮರ್ಫಿ ಅವರು ಕಳೆದ ವಾರ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಅವರಿಗೆ ಪತ್ರ ಬರೆದಿದ್ದಾರೆ.
