ಉದಯವಾಹಿನಿ, ಜಿಂದ್ (ಹರಿಯಾಣ): ಈ ವರ್ಷ ಕಾರ್ಯಾಚರಣೆ ಆರಂಭಿಸಲಿರುವ ದೇಶದ ಮೊದಲ ಹೈಡ್ರೋಜನ್ ರೈಲನ್ನು ತಾಂತ್ರಿಕ ಸುಧಾರಣೆಗಳು ಮತ್ತು ನಿರ್ವಹಣೆಯ ನಂತರ ಮತ್ತೊಮ್ಮೆ ಪ್ರಾಯೋಗಿಕವಾಗಿ ಪರೀಕ್ಷಿಸಲಾಯಿತು. ಈ ಹೈಡ್ರೋಜನ್ ರೈಲು ಆರಂಭದಲ್ಲಿ ಹರಿಯಾಣದ ಜಿಂದ್ -ಸೋನಿಪತ್ ಮಾರ್ಗದಲ್ಲಿ ಸುಮಾರು 89 ಕಿ.ಮೀ. ವ್ಯಾಪ್ತಿಯಲ್ಲಿ ಓಡಲಿದೆ.
ರೈಲು ಜಿಂದ್ ನಿಂದ ಸೋನಿಪತ್ ಮಾರ್ಗದಲ್ಲಿ ಎರಡು ಬಾರಿ ರೈಲು ಸಂಚಾರ ಮಾಡಿತು. ಪ್ರತಿ ಜಂಕ್ಷನ್‌ನಲ್ಲಿ ಒಂದರಿಂದ ಎರಡು ನಿಮಿಷಗಳ ಕಾಲ ನಿಲುಗಡೆಗೊಂಡಿತ್ತು. ರೈಲು ಬೆಳಗ್ಗೆ 7:30ರ ಸುಮಾರಿಗೆ ಹೈಡ್ರೋಜನ್ ಸ್ಥಾವರದಿಂದ ಹೊರಟು ಜಿಂದ್ ಜಂಕ್ಷನ್‌ಗೆ ಹಿಂತಿರುಗಿ, ಅಲ್ಲಿ ಬೆಳಗ್ಗೆ 11:15 ರ ಸುಮಾರಿಗೆ ಸೋನಿಪತ್‌ಗೆ ಮರಳಿತು.ಮತ್ತೆ ಹೈಡ್ರೋಜನ್ ರೈಲು ಪ್ರಯೋಗ: ಹೈಡ್ರೋಜನ್ ರೈಲು ಸುಮಾರು ಮಧ್ಯಾಹ್ನ 2.50 ಕ್ಕೆ ಸೋನಿಪತ್‌ಗೆ ಆಗಮಿಸಿತು. ಹತ್ತು ನಿಮಿಷಗಳ ನಿಲುಗಡೆಯ ನಂತರ, ಅದು ಮಧ್ಯಾಹ್ನ 3 ಗಂಟೆಗೆ ಸೋನಿಪತ್‌ನಿಂದ ಜಿಂದ್‌ಗೆ ಹೊರಟು ಸಂಜೆ 5.10 ಕ್ಕೆ ಜಿಂದ್‌ಗೆ ತಲುಪಿತು. ನಂತರ ರೈಲು ಸಂಜೆ 5.30ಕ್ಕೆ ಮತ್ತೆ ಜಿಂದ್‌ನಿಂದ ಸೋನಿಪತ್‌ಗೆ ವಾಪತ್ ಆಯಿತು. ಮೊದಲ ಬಾರಿಗೆ, ರೈಲು ಜಿಂದ್-ಸೋನಿಪತ್ ಮಾರ್ಗದಲ್ಲಿ ಎರಡು ಟ್ರಿಪ್ಗಳ ಸಂಚಾರ ನಡೆಸಿತು.
ದೇಶದ ಮೊದಲ ಹೈಡ್ರೋಜನ್ ರೈಲು: ಜಿಂದ್‌ನಿಂದ ಸೋನಿಪತ್ ಮಾರ್ಗದಲ್ಲಿ ಮೂರು ಪ್ಯಾಸೆಂಜರ್ ರೈಲುಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ರೈಲು ಬೆಳಗ್ಗೆ 6.15, ಇನ್ನೊಂದು ರೈಲು ಬೆಳಗ್ಗೆ 10.30ಕ್ಕೆ ಮೂರನೇ ರೈಲು ಮಧ್ಯಾಹ್ನ 12.30ಕ್ಕೆ ಜಿಂದ್‌ನಿಂದ ಸಂಚಾರ ಮಾಡುತ್ತದೆ. ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ದೇಶದ ಮೊದಲ ಹೈಡ್ರೋಜನ್ ರೈಲು ಇದಾಗಿದೆ.
ಜಿಂದ್ ಮತ್ತು ಸೋನಿಪತ್ ನಡುವೆ ಬರುವ ನಿಲ್ದಾಣಗಳಿವು : ಜಿಂದ್ ಮತ್ತು ಸೋನಿಪತ್ ನಡುವಿನ ಅಂತರ ಸುಮಾರು 89 ಕಿಲೋಮೀಟರ್. ಜಿಂದ್ ನಿಂದ, ರೈಲು ಭಂಭೇವಾ, ಇಸಾಪುರ್ ಖೇರಿ, ಬುಟಾನಾ, ಗೋಹಾನಾ, ರಾಬ್ರಾ, ಲಾತ್, ಮುಹಾನಾ, ಬರ್ವಾನ್ಸಿ ಮತ್ತು ಸೋನಿತಾಪ್ ನಲ್ಲಿ ನಿಲ್ಲುತ್ತದೆ. ಭಾರತೀಯ ರೈಲ್ವೆಯ ಅಭಿವೃದ್ಧಿಯಲ್ಲಿ ಹೈಡ್ರೋಜನ್ ರೈಲು ಮತ್ತೊಂದು ಪ್ರಮುಖ ಮೈಲಿಗಲ್ಲು ಆಗಿದೆ. ಈ ಯೋಜನೆಯು ಭಾರತದ ರೈಲ್ವೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಸರಸ್ನೇಹಿಯನ್ನಾಗಿ ಮಾಡುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಹೈಡ್ರೋಜನ್ ಇಂಧನ ಚಾಲಿತ ರೈಲನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಓಡಿಸಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
