ಉದಯವಾಹಿನಿ, ಟೆಹ್ರಾನ್‌: ಎಪ್ಸ್ಟೀನ್ ಜಾಲ 9/11 ಶೈಲಿಯಲ್ಲಿ ದಾಳಿ ಮಾಡಲಿದೆ ಎಂದು ಎಚ್ಚರಿಕೆ ನೀಡಿದ ಮರುದಿನವೇ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿಯವರನ್ನು (67) ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ನ (Israel) ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ದಾಳಿಯ ಮೊದಲ ದಿನದಂದು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕಳೆದುಕೊಂಡ ಇರಾನ್‌ನ ನಾಯಕತ್ವ ಈಗ ಮತ್ತಷ್ಟು ದುರ್ಬಲಗೊಂಡಿದೆ. ಅವರ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಕೂಡ ಕೋಮಾದಲ್ಲಿದ್ದಾರೆ. ಸೋಮವಾರ (ಮಾ.16) ರಾತ್ರಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿಯವರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲಿ ಲಾರಿಜಾನಿ ಇರಾನ್‌ ಭದ್ರತಾ ಕಾರ್ಯತಂತ್ರವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರ ಸಾವು ದೃಢಪಟ್ಟರೆ, ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ನಂತರ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ಅಧಿಕಾರಿ ಇವರಾಗಲಿದ್ದಾರೆ.

ಜೆಫ್ರಿ ಎಪ್ಸ್ಟೀನ್ ಜಾಲ ಅಮೆರಿಕದ ಮೇಲೆ 9/11 ಶೈಲಿಯಲ್ಲಿ ದಾಳಿ ನಡೆಸಿ ಇರಾನ್‌ ಮೇಲೆ ಆರೋಪ ಹೊರಿಸಲು ಮುಂದಾಗಿದೆ ಎಂದು ಲಾರಿಜಾನಿಯವರು ಮಾ.15 ರಂದು ಆರೋಪಿಸಿದ್ದರು. ಇದಾದ ಮರುದಿನವೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ.

ಯಾರು ಈ ಅಲಿ ಲಾರಿಜಾನಿ? ಲಾರಿಜಾನಿ ಜೂನ್ 3, 1958 ರಲ್ಲಿ ಇರಾಕ್‌ನ ನಜಾಫ್‌ನಲ್ಲಿ ಶ್ರೀಮಂತ ಮತ್ತು ಪ್ರಭಾವಶಾಲಿ ಕುಟುಂಬದಲ್ಲಿ ಜನಿಸಿದರು. ಅವರು ಹತ್ಯೆಯಾದ ಖಮೇನಿಯಯವರ ಆಪ್ತ ಸಹಾಯಕರಾಗಿದ್ದರು. ಹಿಂದೆ ಇರಾನಿನ ಸಂಸತ್ತಿನ ಸ್ಪೀಕರ್ ಆಗಿದ್ದರು. ಆಗಸ್ಟ್ 2025 ರಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಅವರು ಅಮೆರಿಕದೊಂದಿಗೆ ಪರಮಾಣು ಬಗ್ಗೆ ಮಾತುಕತೆಯನ್ನೂ ಸಹ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!