ಉದಯವಾಹಿನಿ, ಇಸ್ಲಾಮಾಬಾದ್ : ಮುಸ್ಲಿಮ್ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿದ್ದ 1,817 ಹಿಂದು ದೇವಾಲಯ ಮತ್ತು ಸಿಖ್ ಗುರುದ್ವಾರಗಳ ಪೈಕಿ ಈಗ ಕೇವಲ 37 ಮಾತ್ರ ಉಳಿದುಕೊಂಡಿವೆ. ಉಳಿದ 1780 ಪೂಜಾ ಸ್ಥಳಗಳು ಕಣ್ಮರೆಯಾಗಿವೆ ಎಂಬ ಆಘಾತಕಾರಿ ವರದಿ ಬಯಲಾಗಿದೆ.ಅಲ್ಪಸಂಖ್ಯಾತ ಒಕ್ಕೂಟದ ಸಂಸದೀಯ ಸಮಿತಿಯ ಮುಂದೆ ಇತ್ತೀಚೆಗೆ ಇಂಥದ್ದೊಂದು ವರದಿ ಮಂಡಿಸಲಾಗಿದೆ. ಅದರಲ್ಲಿನ ದತ್ತಾಂಶಗಳು ಕಠೋರ ವಾಸ್ತವಾಂಶ ಬಿಚ್ಚಿಟ್ಟಿವೆ. ಶತಮಾನಗಳಷ್ಟು ಇತಿಹಾಸ ಹೊಂದಿದ್ದ ಪೂಜಾ ಸ್ಥಳಗಳು ಕಳಪೆ ನಿರ್ವಹಣೆ, ಹಿಂದೂ ಮತ್ತು ಸಿಖ್ ಸಮುದಾಯಗಳ ಜನಸಂಖ್ಯೆ ಕ್ಷೀಣಿಸಿದ್ದರಿಂದ ಅಸ್ವಿತ್ವ ಕಳೆದುಕೊಂಡಿವೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.ಅಲ್ಲಿನ ಮಾಧ್ಯಮಗಳು ವರದಿ ಮಾಡಿದಂತೆ, ಪಾಕಿಸ್ತಾನದಾದ್ಯಂತ ಸದ್ಯ 37 ದೇಗುಲ ಮತ್ತು ಗುರುದ್ವಾರಗಳು ಮಾತ್ರ ಚಾಲ್ತಿಯಲ್ಲಿವೆ. ಉಳಿದವುಗಳು ಕಣ್ಮರೆಯಾಗಿವೆ. ಅಳಿದುಳಿದ ಪೂಜಾ ಸ್ಥಳಗಳ ರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಅಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು ಮತ್ತು ಸಿಖ್ಖರಿಗೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.ದೇಗುಲ ನಿರ್ವಹಣೆ ಹೊಣೆ ಬದಲಿಸಿ: ಅಲ್ಪಸಂಖ್ಯಾತ ಒಕ್ಕೂಟದ ಸಂಸದೀಯ ಸಮಿತಿಯ ಸಭೆಯಲ್ಲಿ ಸಂಚಾಲಕ ದಾನೇಶ್ ಕುಮಾರ್ ಅವರು, ನ್ಯಾಯ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ನೀತಿಗಳನ್ನು ಬದಲಿಸುವ ಅಥವಾ ಸುಧಾರಿಸುವ ಅಗತ್ಯವಿದೆ ಎಂದು ಹೇಳಿದರು.
ಮತ್ತೊಬ್ಬ ಸದಸ್ಯ ಡಾ.ರಮೇಶ್ ಕುಮಾರ್ ವಂಕ್ವಾನಿ, ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ತನ್ನ ವ್ಯಾಪ್ತಿಗೆ ಬರುವ ದೇವಾಲಯಗಳು ಮತ್ತು ಗುರುದ್ವಾರಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಇಟಿಪಿಬಿಯ ನಿರ್ವಹಣಾ ಹೊಣೆಯನ್ನು ಮುಸ್ಲಿಮೇತರರಿಗೆ ಹಸ್ತಾಂತರಿಸಬೇಕು. ಆಗ ಮಾತ್ರ ನಿರ್ಲಕ್ಷಿತ ಧಾರ್ಮಿಕ ಆಸ್ತಿಗಳು ಪುನಃಸ್ಥಾಪನೆ ಸಾಧ್ಯವಾಗಲಿದೆ ಎಂದು ಹೇಳಿದರು.
1947ರ ವಿಭಜನೆಯ ನಂತರ ಇಲ್ಲಿದ್ದ ಹಿಂದೂ ಮತ್ತು ಸಿಖ್ ಸಮುದಾಯಗಳ ಜನರು ಭಾರತಕ್ಕೆ ವಲಸೆ ಹೋದ ಕಾರಣ ಹೆಚ್ಚಿನ ದೇವಾಲಯಗಳು ಮತ್ತು ಗುರುದ್ವಾರಗಳು ಕಣ್ಮರೆಯಾದವು. ಧಾರ್ಮಿಕವಾಗಿ ಮಹತ್ವದ್ದಾಗಿರುವ ಮತ್ತು ಪಾಕಿಸ್ತಾನದ ಬಹುಸಂಸ್ಕೃತಿಯನ್ನು ಪ್ರತಿನಿಧಿಸುವ ತಾಣಗಳನ್ನು ರಕ್ಷಿಸಲು ತುರ್ತು ಕ್ರಮ ಜರುಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
