ಉದಯವಾಹಿನಿ, ರಾಯ್ಪುರ: ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಬೆಲೆತೆತ್ತಿದೆ. ಏಡನ್‌ ಮಾರ್ಕ್ರಂ ಅಮೋಘ ಶತಕದ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಲ್ಲಿ ಸಮಬಲ ಸಾಧಿಸಿದೆ.
ರಾಯ್ಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್‌ ಸೋತ ಭಾರತ ಮೊದಲು ಬ್ಯಾಟಿಂಗ್‌ ಮಾಡಿ 5 ವಿಕೆಟ್‌ ನಷ್ಟಕ್ಕೆ 358 ರನ್‌ ಗಳಿಸಿತ್ತು. ಗೆಲುವಿಗೆ 359 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲೇ 6 ವಿಕೆಟ್‌ ನಷ್ಟಕ್ಕೆ 362 ರನ್‌ ಸಿಡಿಸಿ ಗೆಲುವು ಸಾಧಿಸಿತು.
ನಿಲ್ಲದ ಜೊತೆಯಾಟ: ಚೇಸಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಕ್ವಿಂಟನ್‌ ಡಿಕಾಕ್‌ ವಿಕೆಟ್‌ ಪಡೆದು ಆಘಾತ ನೀಡಿತ್ತು. ಆದ್ರೆ 2ನೇ ವಿಕೆಟ್‌ಗೆ ನಾಯಕ ಟೆಂಬಾ ಬವುಮಾ-ಮಾರ್ಕ್ರಂ 101 ರನ್‌ಗಳ (96 ಎಸೆತ) ಜೊತೆಯಾಟ, 3ನೇ ವಿಕೆಟಿಗೆ ಮಾರ್ಕ್ರಂ-ಬ್ರೀಟ್ಜ್ಕೆ 70 ರನ್‌ಗಳ ಜೊತೆಯಾಟ, 4ನೇ ವಿಕೆಟಿಗೆ ಬ್ರೀಟ್ಜ್ಕೆ-ಡೇವಾಲ್ಡ್‌ ಬ್ರೇವಿಸ್‌ 92 ರನ್‌ಗಳ ಬೃಹತ್‌ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಅಲ್ಲದೇ ರನೌಟ್‌, ಕ್ಯಾಚ್‌ ಕೈಚೆಲ್ಲಿದ ಜೊತೆಗೆ ಅನಗತ್ಯ ರನ್‌ ಬಿಟ್ಟುಕೊಟ್ಟ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು.

ದಕ್ಷಿಣ ಆಫ್ರಿಕಾ ಪರ ಏಡನ್‌ ಮಾರ್ಕ್ರಂ 110 ರನ್‌ (98 ಎಸೆತ, 4 ಸಿಕ್ಸ್‌, 10 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್‌ (64 ಎಸೆತ, 5 ಬೌಂಡರಿ), ಡೇವಾಲ್ಡ್‌ ಬ್ರೇವಿಸ್‌ 54 ರನ್‌ (34 ಎಸೆತ, 5 ಸಿ‌ಕ್ಸ್‌), ಟೋನಿ ಡಿ ಜೋರ್ಜಿ 17 ರನ್‌, ಕ್ವಿಂಟನ್‌ ಡಿಕಾಕ್‌ 8 ರನ್‌, ಮಾರ್ಕೋ ಜಾನ್ಸೆನ್‌ 2 ರನ್‌ ಗಳಿಸಿದ್ರೆ ಕಾರ್ಬಿನ್ ಬಾಷ್ 15 ಎಸೆತಗಳಲ್ಲಿ ಸ್ಫೋಟಕ 29 ರನ್‌, ಕೇಶವ್‌ ಮಹಾರಾಜ್‌ 10 ರನ್‌ ಗಳಿಸಿ ಅಜೇಯರಾಗುಳಿದರು. ಅಲ್ಲದೇ ವೈಡ್‌, ನೋಬಾಲ್‌, ಲೆಗ್‌ಬೈಸ್‌ನಿಂದ 18 ರನ್‌ ಹೆಚ್ಚುವರಿಯಾಗಿ ತಂಡಕ್ಕೆ ಸೇರ್ಪಡೆಯಾಯಿತು.

Leave a Reply

Your email address will not be published. Required fields are marked *

error: Content is protected !!