ಉದಯವಾಹಿನಿ, ಆಸ್ಟ್ರೇಲಿಯಾ ವಿರದ್ಧ ಆಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root) ಶತಕವನ್ನು ಬಾರಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 40ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದ ಹಾಗೆ ಆಸ್ಟ್ರೇಲಿಯಾದಲ್ಲಿ ಈ ಸರಣಿಯಲ್ಲಿ ಆಡಿದ ಮೂರು ಇನಿಂಗ್ಸ್‌ಗಳ ಪೈಕಿ ಒಂದು ಶತಕವನ್ನು ಬಾರಿಸಿದ್ದಾರೆ.
ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಇಂಗ್ಲೆಂಡ್ ತಂಡಕ್ಕೆ ಮಿಚೆಲ್ ಸ್ಟಾರ್ಕ್, ಬೆನ್ ಡಕೆಟ್ ಹಾಗೂ ಒಲ್ಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದ್ದರು. ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾಗಿದ್ದ ಜೋ ರೂಟ್ ಹಾಗೂ ಝ್ಯಾಕ್ ಕ್ರಾವ್ಲಿ (76) ಅವರು 117 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡವನ್ನು ಮೇಲೆತ್ತಿದರು.
ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಜೋ ರೂಟ್ ಅವರು, ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಮೊದಲನೇ ದಿನದಾಟದ ಅಂತ್ಯಕ್ಕೆ 202 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ ಅಜೇಯ 135 ರನ್‌ಗಳನ್ನು ಕಲೆ ಹಾಕಿದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್‌ಗಳು ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜೋ ರೂಟ್, ಆಸೀಸ್ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 1000 ಟೆಸ್ಟ್ ರನ್‌ಗಳನ್ನು ಕೂಡ ಪೂರ್ಣಗೊಳಿಸಿದರು. ಕಾಂಗರೂ ನಾಡಿನಲ್ಲಿ ಆಡಿದ 30 ಇನಿಂಗ್ಸ್‌ಗಳಿಂದ ಒಂದು ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದಾರೆ.
