ಉದಯವಾಹಿನಿ, ಲಖನೌ: ಇತ್ತೀಚೆಗೆ ಓದಿನ ವಿಚಾರಕ್ಕಿಂತಲೂ ಹೆಚ್ಚಾಗಿ ಶಿಕ್ಷಕರು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಘಟನೆಗಳೇ ಹೆಚ್ಚಾಗುತ್ತಿದೆ. ಮಕ್ಕಳ ಕೈಗೆ ಶಿಕ್ಷಕರು ಪೊರಕೆ ಕೊಟ್ಟು ಶೌಚಾಲಯ ಕ್ಲೀನ್ ಮಾಡಿಸುತ್ತಿರುವ ಘಟನೆ ಆಗಾಗ ನಡೆಯುತ್ತಲೇ ಇರುತ್ತದೆ. ಇದರ ಬೆನ್ನಲ್ಲೇ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಇಟ್ಟಿಗೆಗಳನ್ನು ಹೊರಿಸಿದ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಥಮಿಕ ಶಾಲಾ ಮಕ್ಕಳನ್ನು ಶಾಲೆಯ ಆವರಣದಲ್ಲಿ ಇಟ್ಟಿಗೆಗಳನ್ನು ಹೊತ್ತುಕೊಂಡು ಹೋಗಲು ಒತ್ತಾಯಿಸಲಾಗಿದೆ. ಈ ಘಟನೆ ಅಮವಾನ್ ಬ್ಲಾಕ್‌ನಲ್ಲಿರುವ ಸಂದಿ ನಾಗಿನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಮಕ್ಕಳನ್ನು ಬಾಲ ಕಾರ್ಮಿಕರಂತೆ ದುಡಿಸಿಕೊಳ್ಳುವ ಈ ದೃಶ್ಯವನ್ನು ಕಂಡ ನೆಟ್ಟಿಗರು ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಿಡಿಕಾರಿದ್ದಾರೆ. ವಿಡಿಯೊದಲ್ಲಿ ಸಮವಸ್ತ್ರ ಧರಿಸಿದ ಹಲವು ಮಕ್ಕಳು ಇಟ್ಟಿಗೆಗಳನ್ನು ಹೊರಲು ಹೆಣಗಾಡುತ್ತಿರುವುದನ್ನು ನೋಡಬಹುದು. ಚಿಕ್ಕ ಮಕ್ಕಳಲ್ಲಿ ಕೆಲವರು ದಣಿದಂತೆ ಕಾಣುತ್ತಿದ್ದರೂ, ಭಾರವಾದ ಇಟ್ಟಿಗೆಗಳನ್ನು ಹೊರಲು ಶಿಕ್ಷಕಿ ಬಲವಂತ ಪಡಿಸಿತ್ತಿರುವ ದೃಶ್ಯ ಸೆರೆಯಾಗಿದೆ.
