ಉದಯವಾಹಿನಿ, ವಾಷಿಂಗ್ಟನ್: ಆಫ್ರಿಕನ್ ಅಮೆರಿಕನ್ ಗಾಯಕಿ ಮತ್ತು ಭಾರತದ ಅಭಿಮಾನಿಯೂ ಆಗಿರುವ ಮೇರಿ ಮಿಲ್ಬೆನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ವಿಶ್ವದಲ್ಲೇ, ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ನಾಯಕರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ವಾರ ನವದೆಹಲಿಯಲ್ಲಿ ಶೃಂಗಸಭೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೋದಿ ನಿರ್ವಹಿಸಿದ ರೀತಿಯನ್ನು ಶ್ಲಾಘಿಸಿದ್ದಾರೆ. ಭಾರತದ ಬಗ್ಗೆ ಅಮೆರಿಕ ತನ್ನ ಧೋರಣೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಿಲ್ಬೆನ್, ಪ್ರಧಾನಿ ಮೋದಿ-ಪುಟಿನ್ ನಡುವಿನ ಸಂಬಂಧವು ಎರಡೂ ದೇಶಗಳ ನಡುವಿನ ಆಳವಾದ ಮೈತ್ರಿಯನ್ನು ಪ್ರತಿಬಿಂಬಿಸುತ್ತದೆ. ಭಾರತದ ವಿಸ್ತರಿಸುತ್ತಿರುವ ಜಾಗತಿಕ ಪಾತ್ರದ ದೃಷ್ಟಿಕೋನದಲ್ಲಿ ಇದನ್ನು ನೋಡಬೇಕು. ಪ್ರಧಾನ ಮಂತ್ರಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ದೃಷ್ಟಿಕೋನದಿಂದ ಇದು ಅತ್ಯುತ್ತಮ ಸಭೆಯಾಗಿತ್ತು ಎಂದು ಅವರು ಹೇಳಿದರು. ಜತೆಗೆ, ಇದು ನಿಖರವಾಗಿ ಭಾರತ ಮತ್ತು ರಷ್ಯಾ ನಡುವಿನ ಆಳವಾದ ಮೈತ್ರಿಯಾಗಿದೆ. ಅಮೆರಿಕ ಮತ್ತು ಭಾರತ ಹೊಂದಿರುವ ಆಳವಾದ ಸಂಬಂಧ ಮತ್ತು ಮೈತ್ರಿಯಂತೆ ಇದು ಎಂದೂ ಅವರು ಬಣ್ಣಿಸಿದರು.
