ಉದಯವಾಹಿನಿ, ಇಸ್ಲಾಮಾಬಾದ್ : ದೇಶಗಳ ಸಂಸತ್ ಕಲಾಪದಲ್ಲಿ ಆಡಳಿತ ಅಭಿವೃದ್ಧಿಗೆ, ಹೊಸ ನೀತಿ ನಿರ್ಧಾರಗಳಿಗೆ ಹಾಗೆ ನೂತನ ಯೋಜನೆ ಜಾರಿ ತರುವ ಸಲುವಾಗಿ ಜನಪ್ರತಿನಿಧಿಗಳೊಂದಿಗೆ ಸಭೆ, ನಡೆಸಲಾಗುತ್ತದೆ. ಇದೀಗ ಪಾಕಿಸ್ತಾನದಲ್ಲಿಯೂ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು. ಎಂದಿನಂತೆ ಸಂಸದರು, ಜನ ಪ್ರತಿನಿಧಿಗಳು ಭಾಗಿಯಾಗುತ್ತಿದ್ದಾರೆ. ಈ ಮಧ್ಯೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕತ್ತೆಯೊಂದು ದಿಢೀರ್ ಆಗಿ ಸಂಸತ್‌ಗೆ ಎಂಟ್ರಿ ಕೊಟ್ಟು ಪಾಕಿಸ್ತಾನ ಮುಜುಗರಕ್ಕೊಳಗಾಗಿದೆ. ಸಂಸತ್ತಿನಲ್ಲಿ ರಾಷ್ಟ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಕತ್ತೆಯೊಂದು ಸೆನೆಟ್ ಕೊಠಡಿಗೆ ಎಂಟ್ರಿ ಕೊಟ್ಟಿದೆ. ಈ ಘಟನೆಯಿಂದ ಅಲ್ಲಿದ್ದ ರಾಜಕೀಯ ನಾಯಕರೆಲ್ಲ ಒಂದು ಕ್ಷಣ ದಂಗಾಗಿದ್ದಾರೆ. ಮೇಲ್ಮನೆ ಕಲಾಪಗಳು ನಡೆಯುತ್ತಿದ್ದಾಗ ಕತ್ತೆ ಎಂಟ್ರಿ ಕೊಟ್ಟ ಕಾರಣ ಕೆಲ ಹೊತ್ತುಗೊಂಡಲದ ವಾತಾವರಣ ಕಂಡು ಬಂತು. ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದ ಆರಂಭದಲ್ಲಿ ಪಾಕಿಸ್ತಾನದ ಸಂಸತ್ತಿನೊಳಗೆ ಕಲಾಪ ನಡೆಯುತ್ತಿರುತ್ತಿದ್ದಾಗ ಎಲ್ಲ ಸಂಸದರೂ ತಮ್ಮ ಆಸನದಲ್ಲಿ ಕೂತಿರುವುದು ಕಂಡು ಬಂದಿದೆ. ಅಲ್ಲಿ ಬಹಳ ಗಂಭೀರ ವಿಷಯ ಚರ್ಚೆಯಾಗುತ್ತಿದ್ದ ವೇಳೆ ಕತ್ತೆಯೊಂದು ಸೀದಾ ಸದನದೊಳಗೆ ಬಂದು ದಿಕ್ಕು ತಪ್ಪಿ ಅತ್ತ ಇತ್ತ ಓಡಾಡಿದೆ. ಆಗ ಅಲ್ಲಿದ್ದವರೆಲ್ಲ ಒಂದು ಕ್ಷಣ ಏನಾಯಿತು ಎಂದು ತಿಳಿಯದೆ ಹೌಹಾರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿ ತತ್ ಕ್ಷಣ ಕತ್ತೆಯನ್ನು ಓಡಿಸಲು ಮುಂದಾದರು. ಈ ವೇಳೆ ಆ ಕತ್ತೆಯು ಭಯದಲ್ಲಿ ಓಡಿ ಕೊನೆಗೆ ಸಂಸದರಿಗೆ ಢಿಕ್ಕಿ ಹೊಡೆದಿದ್ದನ್ನು ದೃಶ್ಯದಲ್ಲಿ ಕಾಣಬಹುದು.
