ಉದಯವಾಹಿನಿ, ನ್ಯೂಯಾರ್ಕ್ : ಶ್ರೀಮಂತ ರಾಷ್ಟ್ರಗಳು ಅಂತರಾಷ್ಟ್ರೀಯ ನೆರವನ್ನು ತೀವ್ರವಾಗಿ ಕಡಿತಗೊಳಿಸಿರುವುದರಿಂದ ಜಾಗತಿಕ ಮಕ್ಕಳ ಸಾವಿನ ಪ್ರಮಾಣ ಹೆಚ್ಚಲಿದೆ. 2000ದ ಆರಂಭದಿಂದ ಸಾಧಿಸಿದ ಪ್ರಗತಿ ಈಗ ಅಪಾಯದಲ್ಲಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ದಾನಿ ಬಿಲ್ ಗೇಟ್ಸ್ ಹೇಳಿದ್ದಾರೆ.
ಅಮೆರಿಕಾ ಅಂತರಾಷ್ಟ್ರೀಯ ನೆರವಿನಲ್ಲಿ ಅತ್ಯಧಿಕ ಕಡಿತ ಮಾಡಿದ ರಾಷ್ಟ್ರವಾಗಿದೆ. ಎಲಾನ್ ಮಸ್ಕ್ ಅವರ ನೇತೃತ್ವದ `ಸರಕಾರದ ಕಾರ್ಯದಕ್ಷತೆ ಇಲಾಖೆ’ಯು ಯುಎಸ್‌ಎಯ್ಡ್(ಅಂತರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕಾದ ಏಜೆನ್ಸಿ) ಅನುದಾನವನ್ನು ಥಟ್ಟನೆ ನಿಲ್ಲಿಸಿದ್ದು ಈ ಕ್ರಮವು ಬಹಳಷ್ಟು ಸಾವಿಗೆ ಕಾರಣವಾಗಿದೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಕೂಡಾ ಸಾಗರೋತ್ತರ ನೆರವನ್ನು `ಅಸಮಾನವಾಗಿ’ ಕಡಿತಗೊಳಿಸಿದೆ ಎಂದು ಗೇಟ್ಸ್ ಹೇಳಿರುವುದಾಗಿ AFP ಸುದ್ದಿಸಂಸ್ಥೆ ವರದಿ ಮಾಡಿದೆ.
ಗೇಟ್ಸ್ ಪ್ರತಿಷ್ಠಾನದ ವರದಿಯ ಪ್ರಕಾರ 2025ರಲ್ಲಿ 5ರ ಕೆಳಹರೆಯದ ಮಕ್ಕಳ ಸಾವಿನ ಪ್ರಮಾಣ 4.8 ದಶಲಕ್ಷಕ್ಕೆ ಏರಿಕೆಯಾಗಲಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 2 ಲಕ್ಷದಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಿನ ಪ್ರಮಾಣದಲ್ಲಿ 27% ಇಳಿಕೆಯಾಗಿರುವುದು ಎಚ್‌ಐವಿ, ಮಲೇರಿಯಾ, ಪೋಲಿಯೊ ಹಾಗೂ ಇತರ ತಡೆಯಬಹುದಾದ ರೋಗಗಳ ನಿಯಂತ್ರಣದಲ್ಲಿ ಮಾಡಿರುವ ಪ್ರಗತಿಗೆ ಬೆದರಿಕೆ ಒಡ್ಡಿದೆ. ಸುಮಾರು 30%ದಷ್ಟು ಕಡಿತವು ಮುಂದುವರಿದರೆ 2045ರ ವೇಳೆಗೆ 16 ದಶಲಕ್ಷ ಹೆಚ್ಚುವರಿ ಸಾವು ಸಂಭವಿಸಬಹುದು ಎಂದು ಗೇಟ್ಸ್ ಎಚ್ಚರಿಸಿದ್ದಾರೆ. ಯುಎಸ್‌ಎಯ್ಡ್ ನೆರವು ಸ್ಥಗಿತಗೊಳಿಸಿದ ಬಳಿಕ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ ಎಂದವರು ಟೀಕಿಸಿದ್ದು ಸಹಾಯವನ್ನು ಮರುಸ್ಥಾಪಿಸುವ ಬಗ್ಗೆ ಅಧ್ಯಕ್ಷ ಟ್ರಂಪ್ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!