ಉದಯವಾಹಿನಿ, ಕಿರ್ಗಿಸ್ತಾನ್‌ನ : ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕನಿಷ್ಠ 12 ಕಾರ್ಮಿಕರು ಕಿರ್ಗಿಸ್ತಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಆ ಕಾರ್ಮಿಕರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ಪ್ರಾಣಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕುಟುಂಬಗಳು ಆರೋಪಿಸಿವೆ.ಕಾರ್ಮಿಕರ ಬಗ್ಗೆ ಜಿಲ್ಲಾಡಳಿತ ಉತ್ತರ ಪ್ರದೇಶ ಗೃಹ ಇಲಾಖೆಗೆ ವಿವರವಾದ ವರದಿ ಕಳುಹಿಸಿದೆ. ಗೃಹ ಇಲಾಖೆ ವಾಸ್ತವಿಕ ವಿವರಗಳನ್ನು ಕೇಳಿ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಿದ ನಂತರ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ. ಕಾರ್ಮಿಕರನ್ನು ರವಿಕುಮಾರ್, ಅಜಯ್, ಚಂದ್ರಪಾಲ್, ಸಂತ್ರಮ್, ರೋಹಿತ್, ರಮೇಶ್, ಹರ್ಷರೂಪ್, ಶ್ಯಾಮ ಚರಣ್, ಸಂಜೀವ್, ಪ್ರೇಂಪಾಲ್, ರಾಮಸಾರೆ ಮತ್ತು ಹರಿಶಂಕರ್ ಎಂದು ಗುರುತಿಸಲಾಗಿದೆ.
ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ ಎಲ್ಲ 12 ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದರಿಂದಾಗಿ ಅವರು ಸುರಕ್ಷಿತವಾಗಿ ಮರಳಲು ಸೂಕ್ತ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಡಿಎಂ ಜ್ಞಾನೇಂದ್ರ ಸಿಂಗ್ ತಿಳಿಸಿದರು.
ಕಿರ್ಗಿಸ್ತಾನದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಕುಟುಂಬಗಳು ತಮ್ಮನ್ನು ಚಿತ್ರಹಿಂಸೆಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸ್ಥಳೀಯ ಏಜೆಂಟರು ಅವರನ್ನು ಹಿಂದಿರುಗಿಸಲು 2 ಲಕ್ಷ ರೂ.ವರೆಗೆ ಬೇಡಿಕೆ ಇಡುತ್ತಿದ್ದಾರೆ. ಕಾರ್ಮಿಕರು ತಮ್ಮ ಕುಟುಂಬಗಳಿಗೆ ವಿಡಿಯೊ ಸಂದೇಶಗಳನ್ನು ಕಳುಹಿಸುತ್ತ ತಮ್ಮ ರಕ್ಷಣೆಗಾಗಿ ಮನವಿ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಗಳು ಹಲವು ಬಾರಿ ಪೊಲೀಸರು ಮತ್ತು ಪಿಲಿಭಿಟ್ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಹಲವು ಕುಟುಂಬ ಸದಸ್ಯರು ಈ ವಾರದ ಆರಂಭದಲ್ಲಿ ಡಿಎಂ ಜ್ಞಾನೇಂದ್ರ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ಯಾದವ್ ಅವರನ್ನು ಭೇಟಿ ಮಾಡಿ ನಡೆದ ವಿಚಾರವನ್ನು ವಿವರಿಸಿದರು. ಕುಟುಂಬಗಳ ಪ್ರಕಾರ, ಸುಮಾರು ಮೂರು ತಿಂಗಳ ಹಿಂದೆ ಸ್ಥಳೀಯ ನೇಮಕಾತಿ ಏಜೆನ್ಸಿಯನ್ನು ನಡೆಸುವ ಏಜೆಂಟರು ಕಾರ್ಮಿಕರನ್ನು ಕಿರ್ಗಿಸ್ತಾನ್‌ಗೆ ಕಳುಹಿಸಿದ್ದರು. ಪ್ರತಿಯೊಬ್ಬ ಕಾರ್ಮಿಕನು ಸುಮಾರು 2.5 ಲಕ್ಷ ರೂ. ಪಾವತಿಸಿದ್ದಾಗಿ ವರದಿಯಾಗಿದೆ. ಅವರನ್ನು 59 ದಿನಗಳ ವೀಸಾದ ಮೇಲೆ ತಪ್ಪು ಮಾಹಿತಿ ಇರುವ ಒಪ್ಪಂದಗಳೊಂದಿಗೆ ಕಳುಹಿಸಲಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ.
