ಉದಯವಾಹಿನಿ, ಅಸ್ಸಾಂ : ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನರ‍್ಮಾಣವಾಗಿದೆ. ಬೊಂಗೈಗಾವ್ ಜಿಲ್ಲೆಯ ಬಸ್ಟರಿ ಗ್ರಾಮದ ಸಮೀಪದಲ್ಲಿರುವ ಆಯಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಸುತ್ತಮುತ್ತ ಇರುವ ಪ್ರದೇಶಗಳಿಗೆಲ್ಲಾ ನೀರು ನುಗ್ಗಿ ಭಾರೀ ಅವಾಂತರವನ್ನು ಸೃಷ್ಟಿ ಮಾಡಿದೆ.
ಆಯಿ ನದಿ ಪ್ರವಾಹದಿಂದಾಗಿ ಸುಮಾರು ೩೦ ರಿಂದ ೪೦ ಕುಟುಂಬಗಳು ಜಲ ಸಮಾಧಿಯಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಕೇವಲ ಮನೆಗಳು ಮಾತ್ರವಲ್ಲದೆ ಜಮೀನು, ದೇಗುಲ,ಮಸೀದಿಗಳು ಸಹ ಆಯಿ ನದಿ ಪ್ರವಾಹಕ್ಕೆ ಮುಳುಗಿ ಹೋಗಿದೆ. ಹೀಗಾಗಿ ಗ್ರಾಮದ ಜನರು ಬಸ್ಟರಿ ಗ್ರಾಮವನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
ಕಳೆದ ಎರಡು ರ‍್ಷಗಳಿಂದ ಈ ಪ್ರದೇಶದ ಜನರು ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದಾರೆ. ಆದರೆ ಈವರೆಗೂ ನಮಗೆ ಸೂಕ್ತ ಪರಿಹಾರಗಳನ್ನು ನೀಡಿಲ್ಲ. ಪ್ರವಾಹಕ್ಕೆ ಗ್ರಾಮದಲ್ಲಿರುವ ೩೦-೪೦ ಮನೆಗಳು ಮುಳುಗಿ ಹೋಗಿದೆ. ಸಾಕಷ್ಟು ಜನರು ಗ್ರಾಮ ಬಿಟ್ಟು ಬೇರೆಡೆ ಸ್ಥಳಾಂತರವಾಗಿದ್ದಾರೆ. ನಮ್ಮ ಮನೆ ಕೂಡ ನದಿಯ ಸಮೀಪದಲ್ಲೇ ಇದೆ. ಯಾವಾಗ ಬೇಕಾದರೂ ನಮ್ಮ ಮನೆ ಪ್ರವಾಹಕ್ಕೆ ತುತ್ತಾಗಬಹುದು ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸಂಪರ‍್ಣ ಹದಗೆಟ್ಟಿದ್ದು, ಬ್ರಹ್ಮಪುತ್ರ ನದಿ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟವು ಹೆಚ್ಚಾಗಿದೆ. ಈ ಹಿನ್ನೆಲೆ, ರಾಜ್ಯದ ೧೭ ಜಿಲ್ಲೆಗಳಲ್ಲಿ ೬೭ ಸಾವಿರಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ .
