ಉದಯವಾಹಿನಿ, ಮುಂಬೈ: ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಮುಂದೂಡಿಕೆ ಕುರಿತು ಕೆಲ ದಿನಗಳಿಂದ ಹರಿದಾಡುತ್ತಿದ್ದ ನಾನಾ ವದಂತಿಗಳಿಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ತೆರೆ ಎಳೆದಿದ್ದಾರೆ. ಮದುವೆಯನ್ನ ರದ್ದುಗೊಳಿಸಿರುವುದಾಗಿ ಖುದ್ದು ಸ್ಮೃತಿ ಅವ್ರೇ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಅಲ್ಲದೇ ಈ ಹೇಳಿಕೆಯೊಂದಿಗೆ ಈ ವಿಷಯ ಕೊನೆಗೊಳಿಸಲು ಬಯಸುತ್ತೇನೆ ಅಂತಲೂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ಕೆಲ ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಹಾಗಾಗಿ ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಅಂತ ಭಾವಿಸಿ ಮಾತನಾಡ್ತಿದ್ದೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ಅದನ್ನ ಹಾಗೆಯೇ ಇಡಲು ಬಯಸುತ್ತೇನೆ. ಆದರೆ ಮದುವೆಯನ್ನ ರದ್ದುಗೊಳಿಸಲಾಗಿದೆ ಎಂಬುದನ್ನ ಸ್ಪಷ್ಟಪಡಿಸಬೇಕಾಗಿದೆ. ಈ ವಿಷಯವನ್ನು ಇಲ್ಲಿಗೆ ಮುಗಿಸಲು ನಾನು ಬಯಸುತ್ತೇನೆ, ನೀವೂ ಕೂಡ ಈ ವಿಷಯವನ್ನ ಇಲ್ಲಿಗೆ ಬಿಡಬೇಕೆಂದು ಮನವಿ ಮಾಡ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆ ಗೌರವಿಸಿ. ನಮ್ಮದೇ ಹಾದಿಯಲ್ಲಿ ಮುಂದುವರಿಯಲು ನಮಗೆ ಅವಕಾಶ ಮಾಡಿಕೊಡಿ ಅಂತ ವಿನಂತಿಸಿಕೊಳ್ಳುತ್ತೇನೆ.
