ಉದಯವಾಹಿನಿ, ಬ್ರಿಸ್ಬೇನ್‌: ಆ್ಯಶಸ್‌ ಟೆಸ್ಟ್‌ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಸತತ ಎರಡು ಪಂದ್ಯ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಗಬ್ಬಾದಲ್ಲಿ ನಡೆದ ಪಿಂಕ್‌ ಬಾಲ್‌(ಹಗಲು-ರಾತ್ರಿ) ಪಂದ್ಯದಲ್ಲಿ ಸ್ವೀವನ್‌ ಸ್ಮಿತ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿತು. ಆಂಗ್ಲರ ಬಾಜ್‌ಬಾಲ್ ಮತ್ತೆ ವಿಫಲಗೊಂಡಿತು.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ವಿಲ್ ಜ್ಯಾಕ್ಸ್ ಏಳನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟ ನಡೆಸುವ ಮೂಲಕ ಪಂದ್ಯವನ್ನು ಡ್ರಾಗೊಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಆಸೀಸ್‌ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌, 311 ರನ್‌ಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಆಸಿಸ್‌, 534 ರನ್ ಗಳಿಸಿ ಆಲೌಟ್‌ ಆಗಿತ್ತು.

177 ರನ್‌ಗಳ ಹಿನ್ನಡೆ ಅನುಭವಿಸಿದ ಬೆನ್‌ ಸ್ಟೋಕ್ಸ್ ಪಡೆ, ಎರಡನೇ ಇನಿಂಗ್ಸ್‌ನಲ್ಲೂ ಚೇತರಿಕೆಯ ಆಟವಾಡಲಿಲ್ಲ. ಕೇವಲ 241 ರನ್‌ ಗಳಿಸಿ ಆಲೌಟ್ ಆಯಿತು. 65 ರನ್‌ಗಳ ಅಲ್ಪ ಗುರಿ ಪಡೆದ ಆಸ್ಟ್ರೇಲಿಯಾ 2 ವಿಕೆಟ್‌ಗೆ 69 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಚೇಸಿಂಗ್‌ ವೇಳೆ ಟ್ರಾವಿಸ್‌ ಹೆಡ್‌ 22 ಎಸೆತಗಳಲ್ಲಿ 22 ರನ್‌ ಗಳಿಸಿ ಔಟಾದರೆ ನಾಯಕ ಸ್ಮಿತ್‌ ಕೇವಲ 9 ಎಸೆತಗಳಲ್ಲೇ 23 ರನ್‌ ಸಿಡಿಸಿ ಜಯ ತಂದುಕೊಟ್ಟರು.
ಇದಕ್ಕೂ ಮೊದಲು, ಬೆನ್ ಸ್ಟೋಕ್ಸ್ ಮತ್ತು ವಿಲ್ ಜ್ಯಾಕ್ಸ್ ತಮ್ಮ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಸೆಷನ್‌ನಲ್ಲಿ ಕ್ರೀಸ್‌ನಲ್ಲಿ ಎರಡು ಗಂಟೆಗಳ ಕಾಲ ಬೇರೂರಿದ ಸ್ಟೋಕ್ಸ್ ಮತ್ತು ಜ್ಯಾಕ್ಸ್ ಇಬ್ಬರೂ ಇನ್ನಿಂಗ್ಸ್ ಸೋಲನ್ನು ತಪ್ಪಿಸಲು ಶ್ರಮಿಸಿದರು. ಈ ಜೋಡಿ ಮೊದಲ ಸೆಷನ್‌ನಲ್ಲಿ ಯಶಸ್ವಿಯಾಗಿ ಆಟವಾಡಿತು, 24 ಓವರ್‌ಗಳಲ್ಲಿ 61 ರನ್‌ಗಳನ್ನು ಗಳಿಸಿತು. ಎರಡನೇ ಸೆಷನ್‌ನಲ್ಲಿ ಈ ಜೋಡಿ ಉತ್ತಮ ಪ್ರದರ್ಶನ ನೀಡಿ 96 ರನ್‌ಗಳ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿತು. ಆದರೆ ಮೊದಲ ಸ್ಲಿಪ್‌ನಲ್ಲಿ ಸ್ಟೀವ್ ಸ್ಮಿತ್ ಒಂದೇ ಕೈಯಿಂದ ಹಿಡಿದ ಅದ್ಭುತ ಕ್ಯಾಚ್‌ಗೆ ಜ್ಯಾಕ್ಸ್ (41) ವಿಕೆಟ್‌ ಕಳೆದುಕೊಂಡರು. ಇಲ್ಲಿಂದ ಇಂಗ್ಲೆಂಡ್‌ ಕುಸಿತ ಕಂಡಿತು. ಸ್ಟೋಕ್ಸ್‌ 50 ರನ್‌ ಬಾರಿಸಿದರು.

Leave a Reply

Your email address will not be published. Required fields are marked *

error: Content is protected !!