ಉದಯವಾಹಿನಿ, ಬೆಳಗಾವಿ: ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದಕ್ಕೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಮತ್ತು ಕಲಬುರಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಸ್ಥರಿಗೂ ಸರ್ಕಾರದಿಂದ ಮುಖ್ಯಮಂತ್ರಿಗಳು ಅಭಿನಂದಿಸಿದರು.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಜಾರಿಗೆ ತಂದರು. ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಈ ಧ್ವಜದಲ್ಲಿ ಮೂರು ವರ್ಣ ಮತ್ತು ಅಶೋಕ ಚಕ್ರವನ್ನು ಒಳಗೊಂಡಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದು, ದೇಶದ ಸ್ವಾಭಿಮಾನ, ಆರ್ಥಿಕತೆ ಮತ್ತು ತ್ಯಾಗಬಲಿದಾನ ಹಾಗೂ ಶಾಂತಿಯ ಸಂದೇಶವನ್ನು ಸಾರುವ ಹಾಗೂ ಭಾರತೀಯರಿಗೆ ರಾಷ್ಟ್ರಭಕ್ತಿಯನ್ನು ಸಾರುವ ಸಂದೇಶವನ್ನು ನೀಡುತ್ತದೆ. ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ.
