ಉದಯವಾಹಿನಿ, ಇಸ್ಲಾಮಾಬಾದ್ : ಪಾಕಿಸ್ತಾನದ ಹೊಸದಾಗಿ ನೇಮಕಗೊಂಡ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾರತದ ವಿರುದ್ಧ ಮತ್ತೊಂದು ಅನಗತ್ಯ ಪ್ರಚೋದನೆಯನ್ನು ಹೊರಡಿಸಿದ್ದಾರೆ. ಭಾರತ ಭ್ರಮೆಯಲ್ಲಿರಬಾರದು. ಭವಿಷ್ಯದಲ್ಲಿ ಭಾರತದಿಂದ ಯಾವುದೇ ಆಕ್ರಮಣ ನಡೆದರೆ ಇನ್ನೂ ಹೆಚ್ಚು ತ್ವರಿತ ಮತ್ತು ತೀವ್ರವಾದ ಪ್ರತಿಕ್ರಿಯೆ ನೀಡುವುದಾಗಿ ನಾಲಗೆ ಹರಿಯಬಿಟ್ಟಿದ್ದಾರೆ.
ಕಳೆದ ವಾರ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಹೊಸ ಹುದ್ದೆಯನ್ನು ಮುನೀರ್ ವಹಿಸಿಕೊಂಡಿದ್ದಾರೆ. ದೇಶದ ಮೊದಲ ಸಿಡಿಎಫ್ ಆಗಿ ನೇಮಕಗೊಂಡಿದ್ದಕ್ಕಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಶಸ್ತ್ರ ಪಡೆಗಳನ್ನುದ್ದೇಶಿ ಮಾತನಾಡಿದರು. ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಪ್ರತಿಕ್ರಿಯೆ ಇನ್ನೂ ವೇಗವಾಗಿ ಮತ್ತು ತೀವ್ರವಾಗಿರಲಿದೆ ಎಂದು ಎಚ್ಚರಿಸಿದರು.
26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗೆ ಕಾರಣವಾಯಿತು. ಮೇ 10ರಂದು ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಒಪ್ಪಂದದೊಂದಿಗೆ ಕೊನೆಗೊಂಡಿತು. ಪಾಕಿಸ್ತಾನ ಶಾಂತಿಯುತ ರಾಷ್ಟ್ರ ಎಂದು ಮುನೀರ್ ಹೇಳಿದರು. ಆದರೆ ಇಸ್ಲಾಮಾಬಾದ್‌ನ ಪ್ರಾದೇಶಿಕ ಸಮಗ್ರತೆ ಅಥವಾ ಸಾರ್ವಭೌಮತ್ವವನ್ನು ಪರೀಕ್ಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಸಮಾರಂಭದಲ್ಲಿ ಪಾಕಿಸ್ತಾನ ಸೇನೆ, ಪಾಕಿಸ್ತಾನ ನೌಕಾಪಡೆ ಮತ್ತು ಪಾಕಿಸ್ತಾನ ವಾಯುಪಡೆಯ ಮೂರು ಸೇವೆಗಳ ತುಕಡಿಗಳು ಫೀಲ್ಡ್ ಮಾರ್ಷಲ್ ಅವರಿಗೆ ಗೌರವ ರಕ್ಷೆಯನ್ನು ನೀಡಿದವು.

Leave a Reply

Your email address will not be published. Required fields are marked *

error: Content is protected !!