ಉದಯವಾಹಿನಿ, ಜಕಾರ್ತಾ : ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿರುವ 7 ಅಂತಸ್ತಿನ ಕಟ್ಟಡದಲ್ಲಿ ಮಂಗಳವಾರ (ಡಿಸೆಂಬರ್‌ 9) ಬೆಂಕಿ ಕಾಣಿಸಿಕೊಂಡು, 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಕಟ್ಟಡದೊಳಗೆ ಸಿಲುಕಿರುವ ಸಂತ್ರಸ್ತರನ್ನು ಹೊರ ತರಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೆಂಟ್ರಲ್ ಜಕಾರ್ತಾ ಪೊಲೀಸ್ ಮುಖ್ಯಸ್ಥ ಸುಸತ್ಯೊ ಪೂರ್ಣೊಮೊ ಕೊಂಡ್ರೊ ಸುದ್ದಿಗಾರರಿಗೆ ವಿವರಿಸಿದ್ದಾರೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ.
ಕಟ್ಟಡದ ಮೊದಲ ಮಹಡಿಯಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು, ನಂತರ ಮೇಲಿನ ಮಹಡಿಗೆ ಹರಡಿತು ಎಂದು ಕಾಂಡ್ರೊ ಹೇಳಿದ್ದಾರೆ. ಆ ಸಮಯದಲ್ಲಿ ಕೆಲವು ಉದ್ಯೋಗಿಗಳು ಕಟ್ಟಡದಲ್ಲಿ ಊಟ ಮಾಡುತ್ತಿದ್ದರು. ಕೆಲವರು ಊಟಕ್ಕಾಗಿ ಹೊರ ಬಂದಿದ್ದರು ಎಂದು ವರದಿಯೊಂದು ಹೇಳಿದೆ. ಈ ಕಟ್ಟಡವು ಟೆರ್ರಾ ಡ್ರೋನ್‌ನ ಇಂಡೋನೇಷ್ಯಾದ ಕಚೇರಿಯಾಗಿದ್ದು, ಇದು ಗಣಿಗಾರಿಕೆ ಮತ್ತು ಕೃಷಿ ವಲಯಗಳ ಡ್ರೋನ್‌ ನಿರ್ಮಿಸುತ್ತದೆ. ಈ ಕಂಪನಿಯು ಜಪಾನಿನ ಡ್ರೋನ್ ಸಂಸ್ಥೆ ಟೆರ್ರಾ ಡ್ರೋನ್ ಕಾರ್ಪೊರೇಷನ್‌ನ ಇಂಡೋನೇಷ್ಯಾದ ಘಟಕ ಎಂದು ತಿಳಿದು ಬಂದಿದೆ. ಸದ್ಯ ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *

error: Content is protected !!