ಉದಯವಾಹಿನಿ, ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಗೆಲುವಿನ ಆರಂಭ ಪಡೆದುಕೊಂಡಿದೆ. ಡಿಸೆಂಬರ್‌ 9 ರಂದು ಕಟಕ್‌ನ ಬಾರಬತಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಆತಿಥೇಯ ಟೀಮ್‌ ಇಂಡಿಯಾ 101 ರನ್​ಗಳಿಂದ ಜಯ ದಾಖಲಿಸಿದೆ. ಆ ಮೂಲಕ ಮುಂಬರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದೆ. ಆದರೆ, ಆರಂಭಿಕರಾಗಿ ಟೀಮ್‌ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸಿದ ಉಪನಾಯಕ ಶುಭಮನ್‌ ಗಿಲ್‌ ಮತ್ತು ಅಭಿಷೇಕ್‌ ಶರ್ಮಾ ಅವರು ಆರಂಭದಲ್ಲೇ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ ಭಾರತ ತಂಡ 2.4 ಓವರ್‌ಗಳಲ್ಲಿ ಕೇವಲ 17 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದು ಭಾರತ ತಂಡದ ಅಗ್ರ ಕ್ರಮಾಂಕದ ಮೇಲೆ ಕಳವಳ ಹುಟ್ಟುಹಾಕಿದೆ.

ಅಭಿಷೇಕ್‌ ಶರ್ಮಾ ಅವರು ಪವರರ್‌ಪ್ಲೇ ನಲ್ಲಿ ರನ್‌ ಕಲೆಹಾಕಲು ಪರದಾಡಿದ ಪರಿಣಾಮ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಿರಂತರವಾಗಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ವಿಕೆಟ್‌ ಪಡೆದು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕದರು. ಆದರೆ ಕೊನೆಗೆ ಹಾರ್ದಿಕ್‌ ಪಾಂಡ್ಯ ಅವರ ಸ್ಪೋಟಕ ಬ್ಯಾಟಿಂಗ್‌ ಪರಿಣಾಮವಾಗಿ ಭಾರತ ತಂಡ 170ರ ಗಡಿ ದಾಟಿತು.

ಏಷ್ಯಾಕಪ್‌ ಟೂರ್ನಿಯಲ್ಲಿ ಶುಭಮನ್‌ ಗಿಲ್‌ ತಂಡಕ್ಕೆ ಮರಳಿದಾಗಿನಿಂದ ಟೀಮ್‌ ಇಂಡಿಯಾ ಅಗ್ರ ಕ್ರಮಾಂಕದ ಪ್ರದರ್ಶನ ಕುಸಿದಿದೆ. ಅಭಿಷೇಕ್ ಶರ್ಮಾ ಮತ್ತು ಶುಭಮನ್‌ ಗಿಲ್‌ ಅವರು ಟೀಮ್‌ ಇಂಡಿಯಾ ಪರ 13 ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿದ್ದು, ಭಾರತ ಕೇವಲ ಒಂದು ಬಾರಿ ಮಾತ್ರ 200ರ ಗಡಿ ದಾಟಿದೆ. ಗಿಲ್‌ ಅವರ ಪ್ರವೇಶಕ್ಕೂ ಮುನ್ನ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸುವಾಗ 12 ಪಂದ್ಯಗಳಲ್ಲಿ ಭಾರತ ಆರು ಬಾರಿ 200ರ ಗಡಿ ದಾಟಿದೆ. ಇದು ಟಿ20ಐ ನಲ್ಲಿ ಗಿಲ್‌ ಅವರ ಆರಂಭಿಕ ಸ್ಥಾನದ ಕುರಿತು ಪ್ರಶ್ನೆ ಹುಟ್ಟುಹಾಕಿದೆ. ಅಭಿಷೇಕ್‌ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಅವರು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಬೇಕಿತ್ತಾ? ಎನ್ನುವ ಪ್ರಶ್ನೆ ಇದೀಗ ಉದ್ಭವವಾಗಿದೆ. ಸ್ಯಾಮ್ಸನ್‌ ಅವರು ಕಳೆದ ವರ್ಷದಲ್ಲಿ ಮೂರು ಟಿ20 ಶತಕಗಳನ್ನು ಬಾರಿಸಿದ್ದು, ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಗಿಲ್‌ ಅವರಿಗಾಗಿ ಆಯ್ಕೆ ಸಮಿತಿ ಸಂಜು ಸ್ಯಾಮ್ಸನ್‌ ಅವರನ್ನು ತಂಡದಿಂದ ಹೊರಗಿಡುತ್ತಿದೆ.

Leave a Reply

Your email address will not be published. Required fields are marked *

error: Content is protected !!