ಉದಯವಾಹಿನಿ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಹೊರತಾಗಿಯೂ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರು ಏಕದಿನ ವಿಶ್ವಕಪ್‌ ಆಡುವುದರ ಕುರಿತು ಆಯ್ಕೆ ಸಮಿತಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ 2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಆಡಬೇಕು. ಈ ಟೂರ್ನಿಯಲ್ಲಿ ಅವರು ಭಾರತ ತಂಡದ ಪರ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಅವರು ಪ್ರಮುಖ ಸರಣಿಗಳಲ್ಲಿ ಆಡಬೇಕು ಮತ್ತು ಕೆಳ ಶ್ರೇಯಾಂಕದಲ್ಲಿರುವ ತಂಡಗಳ ವಿರುದ್ಧ ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ, “ವಿರಾಟ್ ಮತ್ತು ರೋಹಿತ್ ಭಾರತದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎಂಬು ಸತ್ಯ.
ಇತ್ತೀಚಿನ ಏಕದಿನ ಸರಣಿಯಲ್ಲಿ ಅವರು ಆಡಿದ ರೀತಿ ನೋಡಿದರೆ, ಅವರು 2027ರ ವಿಶ್ವಕಪ್ ಟೂರ್ನಿಯವರೆಗೆ ಆಡಬಲ್ಲರು ಎಂಬ ವಿಶ್ವಾಸವಿದೆ. ನೀವು ಈ ಸ್ಟಾರ್‌ ಆಟಗಾರರನ್ನು ಉಳಿಸಿಕೊಳ್ಳಬೇಕು. ಭಾರತ ದುರ್ಬಲ ತಂಡದ ವಿರುದ್ಧ ಆಡುವಾಗ, ಅವರು ಕೆಲವು ಹೊಸ ಆಟಗಾರರನ್ನು ಪ್ರಯತ್ನಿಸಬಹುದು ಮತ್ತು ವಿರಾಟ್ ಮತ್ತು ರೋಹಿತ್‌ಗೆ ವಿಶ್ರಾಂತಿ ನೀಡಬಹುದು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಟೀಮ್‌ ಇಂಡಿಯಾ ಪ್ರದರ್ಶನದ ಕುರಿತು ಮಾತನಾಡಿದ ಅಫ್ರಿದಿ, ಗೌತಮ್‌ ಗಂಭೀರ್‌ ಅವರನ್ನು ಟೀಕಿಸಿದ್ದಾರೆ. ಗಂಭೀರ್ ಟೀಮ್ ಇಂಡಿಯಾದೊಂದಿಗೆ ಮಿಶ್ರ ಫಲಿತಾಂಶಗಳನ್ನು ಅನುಭವಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದ ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡವು ಯಶಸ್ಸನ್ನು ಕಂಡಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಫಲರಾಗುತ್ತಿದ್ದಾರೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳಲ್ಲಿ ಸೋಲನುಭವಿಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!