ಉದಯವಾಹಿನಿ, ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ, ಬೌಲರ್‌ಗಳ ಹೀನಾಯ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 101 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ 51 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಸರಣಿ 1-1ರಲ್ಲಿ ಸಮಬಲಗೊಂಡಿದೆ.
ಇಲ್ಲಿನ ಮಲ್ಲನ್‌ಪುರ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್‌ ಡಿಕಾಕ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 213 ರನ್‌ ಕಲೆಹಾಕಿತು. 214 ರನ್‌ಗಳ ಬೃಹತ್‌ ಗುರಿ ಪಡೆದ ಭಾರತ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಆರಂಭದಲ್ಲೇ ಆಘಾತ: ಬೃಹತ್‌ ಚೇಸಿಂಗ್‌ ಪಡೆದ ಭಾರತ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಉಪನಾಯಕ ಶುಭಮನ್‌ ಗಿಲ್‌ ಮೊದಲ ಓವರ್‌ನಲ್ಲಿ ತನ್ನ ಪಾಲಿನ ಮೊದಲ ಎಸೆತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಇನ್ನೂ ಸ್ಫೋಟಕ ಪ್ರದರ್ಶನಕ್ಕಿಳಿದ ಅಭಿಷೇಕ್‌ ಶರ್ಮಾ ಕೂಡ 8 ಎಸೆತಗಳಲ್ಲಿ 17 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ನಾಯಕ ಸೂರ್ಯಕುಮಾರ್‌ ಯಾದವ್‌ ಕೇವಲ 5 ರನ್‌ ಗಳಿಸಿ ಔಟಾದರು. ಹೀಗಾಗ ಪವರ್‌ ಪ್ಲೇನಲ್ಲೇ ಭಾರತ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ನಿಧಾನಗತಿಯಲ್ಲಿ ರನ್‌ ಕಲೆಹಾಕುತ್ತಿದ್ದ ಅಕ್ಷರ್‌ ಪಟೇಲ್‌ ಕೂಡ ಕ್ಯಾಚ್‌ ನೀಡಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ- ತಿಲಕ್‌ ವರ್ಮಾ ಜೋಡಿ ಸಣ್ಣ ಪ್ರಮಾಣದ ಜೊತೆಯಾಟ ನೀಡಿದರು. ಮೊದಲ 10 ಓವರ್‌ಗಳಲ್ಲಿನ ಹಿನ್ನಡೆಯಿಂದ ಭಾರತ ಹೀನಾಯ ಸೋಲಿಗೆ ತುತ್ತಾಯಿತು. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ತಿಲಕ್‌ ವರ್ಮಾ 34 ಎಸೆತಗಳಲ್ಲಿ 62 ರನ್‌ ಗಳಿಸಿದ್ರೆ, ಹಾರ್ದಿಕ್‌ ಪಾಂಡ್ಯ 20 ರನ್‌, ಜಿತೇಶ್‌ ಶರ್ಮಾ 27 ರನ್‌, ಅಕ್ಷರ್‌ ಪಡೇಲ್‌ 21 ರನ್‌ ಕೊಡುಗೆ ನೀಡಿದರು.

Leave a Reply

Your email address will not be published. Required fields are marked *

error: Content is protected !!