ಉದಯವಾಹಿನಿ, ಲೆಜೆಂಡ್ಸ್ ಪ್ರೊ ಟಿ20 ಲೀಗ್ ತನ್ನ ಮೊದಲ ಸೀಸನ್‌ನಲ್ಲಿ ಕ್ರಿಸ್ ಗೇಲ್ , ಜಾಕ್ ಕಾಲಿಸ್, ರಾಬಿನ್ ಉತ್ತಪ್ಪ ಅಂಬಾಟಿ ರಾಯುಡು ಮತ್ತು ಸ್ಟುವರ್ಟ್ ಬಿನ್ನಿ ಸೇರಿದಂತೆ ಹಲವು ಕ್ರಿಕೆಟ್ ತಾರೆಯರನ್ನು ಒಂದುಗೂಡಿಸುತ್ತಿದೆ. ವರ್ಷಗಳ ಕಾಲ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದವರು, ಪೈಪೋಟಿ ನಡೆಸಿದ್ದವರು, ಅನೇಕ ನೆನಪುಗಳನ್ನು ನಿರ್ಮಿಸಿದ್ದವರು ಈ ಬಾರಿ ಎಲ್ಲರೂ ಒಂದೇ ವೇದಿಕೆಯಲ್ಲಿ ಪುನರ್ಮಿಲನಗೊಳ್ಳುತ್ತಿದ್ದಾರೆ. ಉದ್ಘಾಟನಾ ಆವೃತ್ತಿಯ ಲೆಜೆಂಡ್ಸ್ ಪ್ರೊ ಲೀಗ್ ಟೂರ್ನಿಯು ಗೋವಾದಲ್ಲಿ ಜನವರಿ 26 ರಿಂದ ಫೆಬ್ರವರಿ 4ರ ವರೆಗೆ ನಡೆಯಲಿದೆ.
ಕ್ರಿಸ್ ಗೇಲ್ ಈ ಬಗ್ಗೆ ಮಾತನಾಡುತ್ತಾ, “ನನ್ನ ಅತ್ಯುತ್ತಮ ಕ್ರಿಕೆಟ್ ದಿನಗಳು ಮತ್ತೆ ನೆನಪಾಗುತ್ತಿವೆ. ಕಾಲಿಸ್ ವಿರುದ್ಧ ಆಡಿದಾಗ ಅವರನ್ನು ಮೀರಿಸುವುದು ಅಸಾಧ್ಯವೆನಿಸುತ್ತಿತ್ತು. ಉತ್ತಪ್ಪ ಜೊತೆ ಬ್ಯಾಟಿಂಗ್ ಬಗ್ಗೆ ಅನೇಕ ಸಲ ಮಾತುಕತೆ ನಡೆಸಿದ್ದೇನೆ, ರಾಯುಡು ಜೊತೆ ತುಂಬಾ ತಮಾಷೆ ಮಾಡಿಕೊಂಡಿದ್ದೇನೆ. ಈಗ ಧವನ್, ವಾಟ್ಸನ್ ಜೊತೆ ಮತ್ತೆ ಆಡಲು ಈ ಲೆಜೆಂಡ್ಸ್ ಪ್ರೊ T20 ಲೀಗ್ ಅವಕಾಶ ನೀಡುತ್ತಿದೆ,” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಜಾಕ್ ಕಾಲಿಸ್ ಈ ಬಗ್ಗೆ ಮಾತನಾಡಿ,”ಕ್ರಿಕೆಟ್‌ನಿಂದ ಸ್ವಲ್ಪ ದೂರವಾದ ಮೇಲೆ ಕೈಯಲ್ಲಿ ಬ್ಯಾಟ್ ಹಿಡಿಯುವ ಅನುಭವ ನನಗೆ ಬಹಳ ಮಿಸ್ ಆಗುತ್ತಿತ್ತು. ಈಗ ಈ ಲೀಗ್ ಮೂಲಕ ಪುನಃ ಬ್ಯಾಟ್ ಬೀಸುವುದು, ಬಾಲ್ ಹೊಡೆಯುವುದು, ಟೈಮಿಂಗ್ ಹುಡುಕುವುದು ಮತ್ತೆ ಆಟಗಾರನಂತೆ ಭಾಸವಾಗುವುದು ಇವೆಲ್ಲವೂ ಮರಳಿ ಬರುವುದಕ್ಕೆ ಸಂತಸವಾಗಿದೆ,” ಎಂದರು.
ರಾಬಿನ್ ಉತ್ತಪ್ಪ ಮಾತನಾಡಿ “ನಾನು ಅಂಬಾಡಿ ರಾಯುಡು ಅವರನ್ನು ಎದುರಾಳಿಯಾಗಿ ಎದುರಿಸಿದ್ದೇನೆ, ನಂತರ ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೇನೆ. ದಿನೇಶ್ ಕಾರ್ತಿಕ್ ಜೊತೆ ಪಂದ್ಯ ಮುಗಿಸುವ ತಂತ್ರಗಳ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೇವೆ. ಅಂಡರ್-19 ದಿನಗಳಿಂದ ಇರುವ ನಮ್ಮ ಸ್ನೇಹವೂ ವಿಶೇಷ,” ಎಂದು ಹೇಳಿದ್ದಾರೆ.
