ಉದಯವಾಹಿನಿ, ಗೊಮಾ : ರವಾಂಡಾ ದೇಶದ ಬೆಂಬಲ ಪಡೆದಿರುವ ಎಂ23 ಬಂಡುಕೋರ ಪಡೆ ಪೂರ್ವ ಕಾಂಗೋ ಗಣರಾಜ್ಯದ ದಕ್ಷಿಣ ಕಿವು ಪ್ರಾಂತದಲ್ಲಿ ತನ್ನ ಆಕ್ರಮಣವನ್ನು ತೀವ್ರಗೊಳಿಸಿದ್ದು ಕನಿಷ್ಠ 413 ನಾಗರಿಕರು ಸಾವನ್ನಪ್ಪಿದ್ದಾರೆ. ರವಾಂಡಾದ ವಿಶೇಷ ಪಡೆಗಳು ಈಗಾಗಲೇ ಕಾಂಗೋದ ಆಯಕಟ್ಟಿನ ನಗರ ಉವಿರಾವನ್ನು ಪ್ರವೇಶಿಸಿವೆ ಎಂದು ಪ್ರಾದೇಶಿಕ ಅಧಿಕಾರಿಗಳು ಹೇಳಿದ್ದಾರೆ.
ಉವಿರಾ ಮತ್ತು ಬುಕಾವು ನಡುವಿನ ಪ್ರದೇಶದಲ್ಲಿ ಬಂಡುಕೋರ ಪಡೆಯ ಬಾಂಬ್, ಗ್ರೆನೇಡ್ ಮತ್ತು ಗುಂಡಿನ ದಾಳಿ ತೀವ್ರಗೊಂಡಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ 413ಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ. ನಮಗೆ ದೊರೆತ ಮಾಹಿತಿಯ ಪ್ರಕಾರ, ಬಂಡುಕೋರ ಪಡೆಯ ಜೊತೆ ರವಾಂಡಾದ ವಿಶೇಷ ಪಡೆಗಳು, ರವಾಂಡಾದ ಬಾಡಿಗೆ ಸಿಪಾಯಿಗಳು ಕಾರ್ಯಾಚರಿಸುತ್ತಿದ್ದು, ಇದು ಕದನ ವಿರಾಮ ಮತ್ತು ದೋಹಾ ಹಾಗೂ ವಾಷಿಂಗ್ಟನ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ದಕ್ಷಿಣ ಕಿವು ಸರಕಾರದ ವಕ್ತಾರರು ಖಂಡಿಸಿದ್ದಾರೆ.
ಪೂರ್ವ ಕಾಂಗೋದ ಆಯಕಟ್ಟಿನ ನಗರವಾದ ಉವಿರಾವನ್ನು ನಿಯಂತ್ರಣಕ್ಕೆ ಪಡೆದಿರುವುದಾಗಿ ಎಂ23 ಗುಂಪು ಬುಧವಾರ ಹೇಳಿದೆ. ಸುಮಾರು 2,500 ಹೋರಾಟಗಾರರನ್ನು ಹೊಂದಿರುವ ಎಂ23 ಗುಂಪಿಗೆ ನೆರೆ ರಾಷ್ಟ್ರ ರವಾಂಡಾದ ಬೆಂಬಲವಿದೆ. ಕಾಂಗೋದಲ್ಲಿ ರವಾಂಡಾದ ಸುಮಾರು 4,000 ಯೋಧರಿದ್ದಾರೆ ಎಂದು ಕಾಂಗೋ, ಅಮೆರಿಕಾ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿಗಳು ಆಪಾದಿಸಿದ್ದಾರೆ. ಇದನ್ನು ರವಾಂಡಾ ನಿರಾಕರಿಸಿದ್ದರೂ ಪೂರ್ವ ಕಾಂಗೋದಲ್ಲಿ ತನ್ನ ಕ್ಷಿಪಣಿ ವ್ಯವಸ್ಥೆ ಕಾರ್ಯಾಚರಿಸುತ್ತಿರುವುದನ್ನು ಒಪ್ಪಿಕೊಂಡಿದೆ.
